ಹುಬ್ಬಳ್ಳಿ: ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ ವಿಧಿವಶರಾಗುವ ಮೊದಲು, ವಿಲ್‌ವೊಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ಕಾರು ಚಾಲಕನಾದ ಸಯ್ಯದ್ ಅವರಿಗೆ ದೊಡ್ಡ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ಕನ್ನಡಪರ ಹೋರಾಟಗಳಿಂದಲೇ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು, ನಮ್ಮೆಲ್ಲರನ್ನು ಅಗಲಿ ಆರು ತಿಂಗಳು ಕಳೆದಿದೆ. ಅವರು ವಿಧಿವಶರಾಗುವ ಮೊದಲು ವಿಲ್ ಒಂದನ್ನು ಬರೆದಿದ್ದರು. ತಮ್ಮ ಮೆಚ್ಚಿನ ಕಾರು ಚಾಲಕ ಸಯ್ಯದ್ಗೆ ವಿಲ್ನಲ್ಲಿ ಉಡುಗೊರೆಯೊಂದನ್ನು ಬರೆದಿಟ್ಟಿದ್ದಾರೆ. ತಾವು ಪ್ರಯಾಣ ಮಾಡುತ್ತಿದ್ದ ಮಾರುತಿ ಸುಝೂಕಿ ಕಂಪನಿಯ ಬ್ರೇಝಾ ಎಸ್ಯುವಿ ಕಾರನ್ನು ತಮ್ಮ ಕಾರು ಚಾಲಕನಿಗೇ ಉಡುಗೊರೆಯಾಗಿ ಕೊಡಲು ವಿಲ್ನಲ್ಲಿ ಉಲ್ಲೇಖಸಿರುವುದು ಚಾಲಕನ ಮುಖದಲ್ಲಿ ಸಂತಸ ಮೂಡಿಸಿದೆ.

ಸಯ್ಯದ್ ಸುಮಾರು 25 ವರ್ಷಗಳಿಂದ ಪಾಪು ಅವರ ಕಾರು ಚಲಾಯಿಸುತ್ತಿದ್ದರು. ಚಾಲಕ ಅಷ್ಟೇ ಅಲ್ಲ, ಪಾಪು ಅವರ ನಿತ್ಯದ ಕೆಲಸದ ಜೊತೆಗೆ ಅವರ ಸೇವೆಯನ್ನೂ ಮಾಡುತ್ತಿದ್ದರು. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಸಯ್ಯದ್, ಪಾಪು ಅವರ ಜೊತೆ ಇದ್ದು ಎಲ್ಲ ಕಾರ್ಯ ಮಾಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರತಿ ಕಾರ್ಯಕ್ರಮಕ್ಕೆ ಸಯ್ಯದ್ ಇರಲೇಬೇಕು ಎನ್ನುವ ಮನೋಭಾವ ಹೊಂದಿದ್ದರು ಪಾಪು.
ಪಾಪು ವಿಧಿವಶರಾದರೂ ಕೂಡ ನಂಬಿದವರನ್ನು ಎಂದಿಗೂ ಬಿಡಲ್ಲ ಎಂಬುದಕ್ಕೆ ಅವರು ಬರೆದಿಟ್ಟಿರುವ ವಿಲ್ ಸಾಕ್ಷಿ. 25 ವರ್ಷಗಳಿಂದ ಡಾ. ಪಾಟೀಲ್ ಪುಟ್ಟಪ್ಪರ ಸೇವೆ ಮಾಡಿದ ಕಾರು ಚಾಲಕ ಸಯ್ಯದ್, ತಮಗೆ ಉಡುಗೊರೆಯಾಗಿ ಬಂದಿರುವ ಕಾರಿನಿಂದ ಜೀವನ ಕಟ್ಟಿಕೊಳ್ಳಲು ಸಿದ್ಧರಾಗಿದ್ದಾರೆ. ಕನ್ನಡಕ್ಕೆ ಅನ್ಯಾಯವಾದ್ರೆ ಗುಡುಗುತ್ತಿದ್ದ ಗಟ್ಟಿ ಹೋರಾಟಗಾರನೊಳಗೆ 'ಪಾಪು'ವಿನಂತಾ ಮನಸ್ಸು ಕೂಡ ಇತ್ತು ಅನ್ನೋದಕ್ಕೆ ಇದೇ ಸಾಕ್ಷಿ..