ಧಾರವಾಡ: ನಾಡೋಜ ಪಾಟೀಲ ಪುಟ್ಟಪ್ಪ ಅವರ ನಿಧನಕ್ಕೆ ಶೋಕಾಚರಣೆ ಘೋಷಿಸದ ಕಾರಣ, ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರ ಹಾವೇರಿಯತ್ತ ಹೊರಟ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಉಡಕೇರಿ, ವಿಶ್ವದಲ್ಲಿನ ಎಲ್ಲ ಕನ್ನಡಿಗರು ಪಾಟೀಲ ಪುಟ್ಟಪ್ಪ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಕರ್ನಾಟಕ ಸರ್ಕಾರ ಶೋಕಾಚರಣೆ ಮಾಡುತ್ತೆ ಎನ್ನುವ ಆಶಯ ಇತ್ತು. ಆದ್ರೆ ಸರ್ಕಾರ ಯಾವುದೇ ಶೋಕಾಚರಣೆ ಮಾಡಿಲ್ಲ. ಜಿಲ್ಲಾ ಸಚಿವರೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಈ ನಡೆ ಜನ ವಿರೋಧಿ ನಡೆಯಾಗಿದೆ. ಸಿಎಂ ವೈಯಕ್ತಿವಾಗಿ ಪಾಪು ಬಗ್ಗೆ ಅಪಾರ ಗೌರವ ಹೊಂದಿದ್ದರು. ಯಡಿಯೂರಪ್ಪ ಪುಟ್ಟಪ್ಪನವರನ್ನು ಗುರುಗಳು ಎನ್ನುತ್ತಿದ್ದರು. ಆದರೆ ಈಗ ಹೀಗೆ ಮಾಡಿರುವುದು ಸರಿಯಲ್ಲ. ಸಿಎಂ ನಾಡಿನ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ರಾತ್ರಿ ಹತ್ತು ಗಂಟೆ ಹತ್ತು ನಿಮಿಷಕ್ಕೆ ಪಾಪು ವಿಧಿವಶರಾಗಿದ್ದಾರೆ. ಒಂದು ದಿನದ ಶೋಕಾಚರಣೆ ಅಧಿಕೃತವಾಗಿ ಘೋಷಣೆ ಮಾಡಬೇಕಿತ್ತು. ಪಾಟೀಲ್ ಪುಟ್ಟಪ್ಪ ಅಖಂಡ ಕರ್ನಾಟಕದ ನಾಯಕರಾಗಿದ್ದವರು. ಪ್ರತ್ಯೇಕ ರಾಜ್ಯದ ವಿಷಯ ಬಂದಾಗ ಅದನ್ನು ಖಂಡಿಸುತ್ತಿದ್ದರು. ಅವರ ಬಗೆಗಿನ ಸರ್ಕಾರದ ನಡೆ ತಾತ್ಸಾರ ಮತ್ತು ನಿರ್ಲಕ್ಷ್ಯದಿಂದ ಕೂಡಿದೆ ಎಂದರು.