ಹುಬ್ಬಳ್ಳಿ: ಉಸಿರಾಟ ಮತ್ತು ಆಮ್ಲಜನಕ ಸಮಸ್ಯೆಯಿಂದ ಬಳಲುತ್ತಿರುವವರು ಲಿಂಬೆಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಂಡರೆ ಕೆಲವೇ ಗಂಟೆಗಳಲ್ಲಿ ಗಂಭೀರ ಸಮಸ್ಯೆಯಿಂದ ದೂರ ಇರಬಹುದು ಎಂದು ಉದ್ಯಮಿ ಡಾ. ವಿಜಯ ಸಂಕೇಶ್ವರ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮಗೆ ಗೊತ್ತಿರುವ 200 ಜನರು ಈ ಪದ್ಧತಿಯನ್ನು ಅನುಸರಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ಆಮ್ಲಜನಕ ವೃದ್ಧಿಯಾಗಿದೆ. ಅಲ್ಲದೇ ಉಸಿರಾಟ ಸಮಸ್ಯೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ ಎಂಬುದನ್ನು ಈ ವೇಳೆ ವಿವರಿಸಿದರು.
ಲಿಂಬೆಹಣ್ಣಿನ ರಸವನ್ನು ಬಳಕೆ ಮಾಡುವುದರಿಂದ ಸದ್ಯ ಉಂಟಾಗಿರುವ ಆಮ್ಮಜನಕ ಕೊರತೆಯನ್ನು ನೀಗಿಸಬಹುದು. ಅಲ್ಲದೇ ಶೇ. 80ರಷ್ಟು ಬೆಡ್ಗಳು ಖಾಲಿಯಾಗುತ್ತವೆ ಎಂದು ಹೇಳಿದರು. ಡಾ. ಬಿ.ಎಂ.ಹೆಗಡೆ ಹೇಳಿರುವಂತೆ ಮುಖಕ್ಕೆ ಮತ್ತು ಮೂಗಿನ ಹೊಳ್ಳುಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡರೆ ವೈರಸ್ ದೇಹದೊಳಗೆ ಪ್ರವೇಶಿಸುವುದನ್ನು ತಡೆಯಬಹುದು. ಅಲ್ಲದೇ ಬಿಸಿ ನೀರಿನ ಆವಿಯನ್ನು (ಸ್ಟೀಮ್) ತೆಗೆದುಕೊಳ್ಳುವುದರಿಂದ ಕೊರೊನಾ ವೈರಸ್ನ ತೊಂದರೆಗಳಿಂದ ದೂರ ಇರಬಹುದು. ಇದನ್ನು ನಾವು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ. ಇದರಿಂದಾಗಿ ಹಿಂದಿನಗಿಂತಲೂ ದೇಶಾದ್ಯಂತ ನಾಲ್ಕು ಪಟ್ಟು ಓಡಾಡಿದರೂ ಏನೂ ಆಗಿಲ್ಲ ಎಂದು ಸಂಕೇಶ್ವರ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜನರಲ್ಲಿ ಜಾಗೃತಿ ಕಡಿಮೆ:
ಜನರು ಮಾಸ್ಕ್ ಇಲ್ಲದೇ ಓಡಾಡುತ್ತಾರೆ. ಮದುವೆಗಳಲ್ಲಿ ಜನಜಂಗುಳಿ ಇದೆ. ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ಮುಖ್ಯಮಂತ್ರಿಗಳು ತಡ ಮಾಡಿದರೂ ಸದ್ಯ ಎಚ್ಚೆತ್ತಿದ್ದಾರೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು. ಇಂತಹ ಸಂದರ್ಭದಲ್ಲಿ ಚುನಾವಣಾ ಸಮಾವೇಶ, ಕುಂಭಮೇಳ ಮಾಡಿದ್ದು ಸರಿಯಲ್ಲ. ಕೊರೊನಾದಿಂದ ಸಾರಿಗೆ ಉದ್ಯಮಕ್ಕೆ ಸಮಸ್ಯೆಯಾಗಿದೆ. ನಾನು ವಿಆರ್ಎಲ್ ಬಗ್ಗೆ ಮಾತ್ರ ಹೇಳುತ್ತಿಲ್ಲ. ಬಹುತೇಕ ಎಲ್ಲ ಉದ್ಯಮಕ್ಕೆ ಹೊಡೆತ ಬಿದ್ದಿದೆ.
ಸರ್ಕಾರ ಕಳೆದ ಬಾರಿ ಹೆಚ್ಚುವರಿಯಾಗಿ ಪಡಿತರ ನೀಡಿದ ಸಂದರ್ಭ ಹಲವರು ಕೆಲಸಕ್ಕೆ ಬರಲಿಲ್ಲ. ಇದರಿಂದ ದೇಶದ ಉತ್ಪಾದನೆಗೆ ಹೊಡೆತ ಬೀಳುತ್ತದೆ. ಸವಲತ್ತುಗಳಿಂದ ಜನ ಹಾಳಾಗುತ್ತಿದ್ದಾರೆ. ಹಲವು ಉದ್ಯೋಗಾವಕಾಶಗಳು ಇದ್ದರೂ ಜನ ಮುಂದೆ ಬರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.