ಧಾರವಾಡ: ಅನ್ಯ ರಾಜ್ಯಗಳಿಂದ ಬಂದು ಅಧಿಕಾರಿಗಳ ಕೈಗೆ ಸಿಗದೆ ಕ್ವಾರಂಟೈನ್ನಿಂದ ತಪ್ಪಿಸಿಕೊಂಡಿದ್ದ 90ಕ್ಕೂ ಹೆಚ್ಚು ಜನ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅವರನ್ನೆಲ್ಲಾ ಹುಡುಕಿ ತಪಾಸಣೆ ಮಾಡಿಸಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಮೇ 7ರಿಂದ ಇಲ್ಲಿಯವರೆಗೆ ಬೇರೆ-ಬೇರೆ ರಾಜ್ಯಗಳಿಂದ ವಲಸೆ ಕಾರ್ಮಿಕರು ಮತ್ತು ಇತರರು ಧಾರವಾಡಕ್ಕೆ ಆಗಮಿಸಿದ್ದು, ಅದರಲ್ಲಿ ಸುಮಾರು 1600 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಇದಕ್ಕಾಗಿಯೇ ಧಾರವಾಡ ಹೊರವಲಯದ ಕೃಷಿ ವಿವಿ ಆವರಣದಲ್ಲಿ ಆಗಮನ ತಪಾಸಣಾ ಕೇಂದ್ರ ಮಾಡಲಾಗಿದೆ.
ಕೆಲವರು ಸ್ವಂತ ವಾಹನ ಮಾಡಿಕೊಂಡು ಬಂದಿದ್ದು ಸುಮಾರು ನೂರರಷ್ಟು ಜನ ತಪಾಸಣಾ ಕೇಂದ್ರಕ್ಕೂ ಹೋಗದೆ, ತಪಾಸಣೆ ಮಾಡಿಸಿಕೊಳ್ಳದೆ ತಪ್ಪಿಸಿಕೊಂಡು ಹೋಗಿ ಮನೆ ಸೇರಿದ್ದರು. ಆದ್ರೆ ಇವರೆಲ್ಲಾ ಜಿಲ್ಲೆಯ ಗಡಿಯ ಚೆಕ್ ಪೋಸ್ಟ್ ದಾಟಿ ಬರುತ್ತಿದ್ದಂತೆಯೇ ಅವರನ್ನು ವಿಶೇಷವಾಗಿ ಟ್ರ್ಯಾಕ್ ಮಾಡಿರುವ ಅಧಿಕಾರಿಗಳು, ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರ ಮೂಲಕ ಮನೆಗಳಲ್ಲಿ ಇರೋದನ್ನು ಪತ್ತೆ ಹಚ್ಚಿ ಸುಮಾರು 90 ಜನರನ್ನು ಹಿಡಿದುಕೊಂಡು ಬಂದು, ತಪಾಸಣೆ ಮಾಡಿಸಿದ್ದಲ್ಲದೆ ಕ್ವಾರಂಟೈನ್ ಸೀಲ್ ಕೂಡಾ ಹಾಕಿ ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.