ಹುಬ್ಬಳ್ಳಿ: ಕಳೆದ ವಾರದ ಹಿಂದೆ ಸುರಿದ ಭಾರೀ ಮಳೆಗೆ ಹುಬ್ಬಳ್ಳಿ ದೋಬಿ ಘಾಟ್ ಜನರು ತತ್ತರಿಸಿ ಹೋಗಿದ್ದಾರೆ. ಇಷ್ಟಾದರೂ ಜಲಮಂಡಳಿ ಅಧಿಕಾರಿಗಳು ಮಾತ್ರ ಸ್ಪಂದಿಸಿಲ್ಲ ಎಂದು ಆರೋಪಿಸಿ ದೋಬಿ ಘಾಟ್ನ ನಿವಾಸಿಗಳು ಬಿಂದಿಗೆ ಹಿಡಿದು ಪ್ರತಿಭಟನೆ ಮಾಡಿದರು.
ಇನ್ನು ಬಿಟ್ಟು ಬಿಡದೇ ಸುರಿದ ಮಳೆಗೆ ನೀರಿನ ಪೈಪ್ ಲೈನ್ಗಳು ಒಡೆದು ಹೋದ ಪರಿಣಾಮ ಮಳೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ನೀರು ಸರಬರಾಜು ಆಗಿಲ್ಲ. ಅಲ್ಲದೇ ಹನಿ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಇದೀಗ ಸಂಗ್ರಹಿಸಲಾದ ಮಳೆಯ ನೀರನ್ನು ಬಳಸುತ್ತಿದ್ದೇವೆ. ಮೊದಲೇ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಲ ಮಂಡಳಿ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಕೂಡಲೇ ನೀರು ಸರಬರಾಜು ಮಾಡುವಂತೆ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.