ಧಾರವಾಡ: ನಾವು ಇಡೀ ದೇಶಾದ್ಯಂತ ಹೋರಾಟಗಳನ್ನು ಮಾಡುತ್ತೇವೆ. ಸರ್ಕಾರದಿಂದ ನಮ್ಮ ಹೋರಾಟಕ್ಕೆ ಅನುಮತಿಯ ಅಗತ್ಯ ಇಲ್ಲ. ಸಭೆಯ ದಿನ, ಸ್ಥಳ ಹಾಗೂ ಸಮಯದ ಮಾಹಿತಿ ಮಾತ್ರ ನೀಡುತ್ತೇವೆ. ಅನುಮತಿ ಕೊಡುತ್ತಾರೋ ಬಿಡುತ್ತಾರೋ, ಅದು ನಮಗೆ ಬೇಕಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ವೈಚಾರಿಕ ಕ್ರಾಂತಿ. ಇದನ್ನು ಬಂದೂಕಿನಿಂದ ಹತ್ತಿಕ್ಕಲು ಆಗುವುದಿಲ್ಲ, ದೇಶದಲ್ಲಿ ಸಾಕಷ್ಟು ಹೋರಾಟದ ಕೇಂದ್ರಗಳನ್ನು ಮಾಡುತ್ತೇವೆ, ಅದಕ್ಕಾಗಿ ರಣನೀತಿ ಮಾಡುತ್ತಿದ್ದೇವೆ. ಗುಜರಾತ್, ರಾಜ್ಯಸ್ಥಾನ, ಬಿಹಾರ, ಉತ್ತರ ಪ್ರದೇಶ ಸೇರಿ ಎಲ್ಲ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ. ಎಲ್ಲವನ್ನೂ ಸರ್ಕಾರ ಖಾಸಗೀಕರಣ ಮಾಡುತ್ತಿದೆ ಎಂದು ದೂರಿದರು.
ಮುಂದೊಮ್ಮೆ ಸಂಸತ್ತಿಗೂ ಹೋಗಬಹುದು, ಈಗಾಗಲೇ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಕೂಡ ವ್ಯಾಪಾರಿಯಂತವರೇ ಬರುತ್ತಿದ್ದಾರೆ. ಯಾವಾಗಲೋ ಸಂಸತ್ ಮೂಕ ಮತ್ತು ಕಿವುಡಾಗಿದೆ. ಅದಕ್ಕೆ ಈಗ ಬೀದಿಯಿಂದ ಧ್ವನಿ ಕೇಳಿ ಬರುತ್ತಿದೆ ಎಂದರು.
ಇನ್ನೋರ್ವ ರೈತ ಮುಖಂಡ ಯುದ್ದವೀರ ಸಿಂಗ್ ಮಾತನಾಡಿ, ಸರ್ಕಾರದ ಸಂಸ್ಥೆಗಳನ್ನೆಲ್ಲ ಖಾಸಗಿಗೆ ಮಾರುತ್ತಿದ್ದಾರೆ. ಬಿಜೆಪಿ 2 ಕೋಟಿ ಜನರಿಗೆ ಉದ್ಯೋಗ ಕೊಡುತ್ತೇವೆ ಅಂತಾ ಸರ್ಕಾರ ಬಂದಾಗ ಹೇಳಿದ್ದರು. ಆದರೆ ಈಗ ಇವರು ಉದ್ಯೋಗ ಕೊಡುವುದರ ಬಗ್ಗೆ ವಿಚಾರ ಮಾಡುತ್ತಿಲ್ಲ. ಉದ್ಯೋಗಗಳನ್ನು ಕೊನೆಗಾಣಿಸುವ ಬಗ್ಗೆಯೇ ವಿಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಎಸ್ಎನ್ಎಲ್ನ್ನು ಮುಗಿಸಿ ಹಾಕಿದರು. ಖಾಸಗೀಕರಣದ ಮೂಲಕ ಸರ್ಕಾರಿ ನೌಕರರನ್ನು ಅಂತ್ಯ ಮಾಡಲಾಗುತ್ತಿದೆ. ಸರ್ಕಾರಿ ಸಂಸ್ಥೆ ಮತ್ತು ನೌಕರರು ಈಗ ಗಂಡಾಂತರದಲ್ಲಿದ್ದಾರೆ. ಸದ್ಯ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಪ್ರಚಾರದಲ್ಲಿ ಕೃಷಿ ಕಾಯ್ದೆ ಬಗ್ಗೆ ಪ್ರಧಾನಿ ಮಾತನಾಡುತ್ತಿಲ್ಲ. ಯಾವ ಬಿಜೆಪಿ ನಾಯಕನೂ ಈ ಕಾಯ್ದೆಯ ಒಳ್ಳೆತನವನ್ನು ಯಾಕೆ ಮಾತನಾಡುತ್ತಿಲ್ಲ. ನಮ್ಮ ಮೇಲೆ ಯಾಕೆ ಎಷ್ಟು ಪ್ರಕರಣ ಹಾಕುತ್ತಾರೆಯೋ ಹಾಕಲಿ, ನಾವು ಬಂಧನವಾಗುವುದಕ್ಕೂ ತಯಾರಾಗಿಯೇ ಇದ್ದೇವೆ. ಬಂಧನ ಆಗೋದು ಕೂಡ ಆಂದೋಲನದ ಒಂದು ಭಾಗ ಎಂದು ಹೇಳಿದರು.