ಹುಬ್ಬಳ್ಳಿ: ಕಳೆದ 20 ವರ್ಷಗಳಿಂದ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಸ್ನೇಹ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಆರಂಭಿಸಿದ ''ತೆರೆದ ತಂಗುದಾಣ ಕೇಂದ್ರ'' ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ರಕ್ಷಣೆ ಜೊತೆಗೆ ಅವರಿಗೆ ಸ್ವಂತ ಉದ್ಯೋಗ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ.
ಕಳೆದ ಐದು ವರ್ಷಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳಿಗೆ ರಕ್ಷಣೆ ನೀಡಿದ ಈ ಸಂಸ್ಥೆಯು ಮಕ್ಕಳಲ್ಲಿ ಉತ್ಸಾಹ, ಆಟದ ಪರಿಕರಗಳನ್ನು ನೀಡಿ ಅವರಲ್ಲಿ ಹೊಸ ಚೇತನ ಮೂಡಿಸುವಲ್ಲಿ ಶ್ರಮಿಸುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೆ ಬೇರೆ ರಾಜ್ಯಗಳಿಂದ ತಪ್ಪಿಸಿಕೊಂಡು ಬಂದು ಇಲ್ಲಿ ಭಿಕ್ಷಾಟನೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಮಕ್ಕಳನ್ನು ಕರೆತಂದು ಅವರ ಭವಿಷ್ಯ ಪುನರುಜ್ಜೀವನಗೊಳಿಸಲು ಶ್ರಮಿಸುತ್ತಿದೆ.
ಮಕ್ಕಳಿಗೆ ಶಿಕ್ಷಣದ ಜತೆಗೆ ಟೈಲರಿಂಗ್, ಬೆಡ್ ಮೇಕಿಂಗ್, ಕೌಶಲ್ಯ ಅಭಿವೃದ್ಧಿ ತರಬೇತಿ, ಕಂಪ್ಯೂಟರ್ ತರಬೇತಿ, ಯೋಗಾಸನ, ಸಂಗೀತ, ನೃತ್ಯ, ಭಜನೆ, ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಕ್ರೀಡಾ ಉತ್ಸಾಹ ಬೆಳಸಲು ಕೇರಂ, ಚೆಸ್ ಮತ್ತು ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಕಾನೂನಿನ ಪ್ರಕಾರ ಆರು ವರ್ಷದಿಂದ 18 ವರ್ಷದವರೆಗೆ ಮಕ್ಕಳಿಗೆ ಆಶ್ರಯ ನೀಡಲು ಅವಕಾಶ ನೀಡಿರುವ ಸರ್ಕಾರದ ಆದೇಶವನ್ನು ಈ ತೆರೆದ ತಂಗುದಾಣ ಕೇಂದ್ರ ಚಾಚೂ ತಪ್ಪದೇ ಪಾಲಿಸುತ್ತಿದೆ. ಮಕ್ಕಳಿಗೆ 18 ವರ್ಷವಾದ ನಂತರ ಅವರನ್ನು ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಸಹ ಮಾಡುತ್ತಿರುವುದು ಶ್ಲಾಘನೀಯ.