ಹುಬ್ಬಳ್ಳಿ : ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವುದಾಗಿ ಅಕ್ಷಯ ಪಾರ್ಕ್ ನಿವಾಸಿ ಪ್ರಮೋದ ಜವಳಿ ಎಂಬುವವರನ್ನು ನಂಬಿಸಿದ ವ್ಯಕ್ತಿಯೊರ್ವ, ಅವರ ಬ್ಯಾಂಕ್ ಖಾತೆಯಿಂದ ₹50 ಸಾವಿರ ರೂ. ಗಳನ್ನು ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಿ.ಕಾಂ ಪದವೀಧರ ಪ್ರಮೋದ ಉದ್ಯೋಗಕ್ಕಾಗಿ ಶೈನ್ ಡಾಟ್ ಕಾಂ ವೆಬ್‌ಸೈಟ್‌ನಲ್ಲಿ ಅರ್ಜಿ ಹಾಕಿದ್ದರು. ಅದನ್ನು ನೋಡಿದ ವಂಚಕಿಯೊಬ್ಬಳು, ಶೈನ್ ಡಾಟ್ ಕಾಂ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ₹50 ಸಾವಿರ ನೀಡಿ ನೋಂದಣಿ ಮಾಡಿದರೆ ವಿವಿಧ ಬ್ಯಾಂಕ್‌ಗಳಲ್ಲಿ ಸಂದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದರು. ಮೊಬೈಲ್‌ಗೆ ಕಳುಹಿಸುವ ಲಿಂಕ್ ಒತ್ತಿ ಮಾಹಿತಿ ಭರ್ತಿ ಮಾಡಬೇಕು. ನಂತರ ಆನ್‌ಲೈನ್ ಮೂಲಕ ಹಣ ಪಾವತಿಸಬೇಕು ಎಂದು ತಿಳಿಸಿದ್ದರು. ಲಿಂಕ್ ಮೂಲಕ ಹಣ ಪಾವತಿ ಮಾಡಲು ಮುಂದಾದಾಗ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
₹68 ಸಾವಿರ ವಂಚನೆ
ಇನ್ನೊಂದು ಪ್ರಕರಣದಲ್ಲಿ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ಕೂಟಿ ಖರೀದಿಸಲು ಮುಂದಾದ ನಗರದ ಸುಭಾಶ್ಕುಮಾರ್ ಸಿಂಗ್ ಅವರು, ಆನ್‌ಲೈನ್ ಮೂಲಕ ₹68 ಸಾವಿರವನ್ನು ಕಳೆದುಕೊಂಡಿದ್ದಾರೆ. ಸೇನೆಯಲ್ಲಿದ್ದ ವ್ಯಕ್ತಿ ಎಂದು ಓಎಲ್‌ಎಕ್ಸ್‌ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊರ್ವ ಹೊಂಡಾ ಆ್ಯಕ್ಟಿವಾ ಸ್ಕೂಟಿ ಮಾರಾಟಕ್ಕಿಟ್ಟಿದ್ದನು. ಅದನ್ನು ಖರೀದಿಸಲು ಮುಂದಾದ ಸುಭಾಶ್ ಕುಮಾರ್ ಅವರು, ಆತನಿಗೆ ಹಣ ಸಂದಾಯ ಮಾಡಿದ್ದರು. ನಂತರ ಹಣವೂ ಇಲ್ಲದೆ, ಸ್ಕೂಟಿಯೂ ಇಲ್ಲದೆ ಅವರು ಮೋಸಕ್ಕೆ ಒಳಗಾಗಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.