ಹುಬ್ಬಳ್ಳಿ: ಇಲ್ಲಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಬೆಂಕಿ ದುರಂತ ಸಂಬಂಧ ಆಕ್ಸನಿಕ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಗದಗ ಮೂಲದ ಮುಂಬೈನ ಉದ್ಯಮಿ ಅಬ್ದುಲ್ ಶೇಖ್ ಎಂಬಾತನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 23ರಂದು ಸಂಭವಿಸಿದ ಅವಘಡದಲ್ಲಿ ಇದುವರೆಗೆ ಐವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಿರ್ಮಲಾ ಎಂಬ ಮಹಿಳೆ ಸೋಮವಾರ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಇನ್ನೂ ಮೂವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಅವಘಡದ ಬಳಿಕ ಕಾರ್ಖಾನೆಯು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತಲ್ಲದೇ, ಕಟ್ಟಡದ ಮೂಲ ಮಾಲೀಕ ಬನಶಂಕರಿ ದೀಕ್ಷಿತ್, ಬಂಧಿತ ಉದ್ಯಮಿ ಶೇಖ್ ಅವರಿಗೆ ಕಾರ್ಖಾನೆ ನಡೆಸಲು ಬಾಡಿಗೆ ನೀಡಿರುವುದು ಗೊತ್ತಾಗಿತ್ತು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ನೇತೃತ್ವದ ಮೂರ್ನಾಲ್ಕು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿದರೂ ಆರೋಪಿ ಶೇಖ್ ಕಣ್ತಪ್ಪಿಸಿಕೊಂಡಿದ್ದರು. ಕಳೆದ ರಾತ್ರಿ ಧಾರವಾಡ ಬಳಿ ಆರೋಪಿಯನ್ನು ವಶಕ್ಕೆ ಬಂಧಿಸಲಾಗಿದೆ. ಹೀಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎರಡಕ್ಕೇರಿದೆ.
ಈಗಾಗಲೇ ಕಾರ್ಖಾನೆಯ ಮ್ಯಾನೇಜರ್ ಮಂಜುನಾಥ ಹರಿಜನ ಎಂಬುವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಶೇಖ್ ಜೊತೆ ಮತ್ತಿಬ್ಬರು ಪಾಲುದಾರರು ಇದ್ದಾರೆ ಎನ್ನಲಾಗಿದ್ದು, ವಿವರ ಸಂಗ್ರಹಿಸಲಾಗುತ್ತಿದೆ. ಪೊಲೀಸರು ಕಾರ್ಖಾನೆ ಕಟ್ಟಡದ ಮೂಲ ಮಾಲೀಕ ಬನಶಂಕರಿ ದೀಕ್ಷಿತ್ ವಿಚಾರಣೆಯನ್ನೂ ಮುಂದುವರೆಸಿದ್ದಾರೆ.
ಇದನ್ನೂ ಓದಿ: ತಾರಿಹಾಳ ಸ್ಪಾರ್ಕರ್ ಫ್ಯಾಕ್ಟರಿ ಅಗ್ನಿ ಅವಘಡ: ಮತ್ತಿಬ್ಬರು ಸಾವು, ಮೃತರ ಸಂಖ್ಯೆ ಮೂರಕ್ಕೆ ಏರಿಕೆ