ಹುಬ್ಬಳ್ಳಿ : ಲೋಕಸಭಾ ಚುನಾವಣೆ ಸಮೀಸುತ್ತಿರುವುದರಿಂದ ಒಂದು ದೇಶ ಒಂದು ಚುನಾವಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹೊರಟಿದ್ದು, ಇದರಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನಾಲ್ಕು ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದಲ್ಲಿ ಸಮಿತಿ ಮಾಡಿದ್ದು, ಅವರು ರಾಜಕೀಯ ವಾಸನೆ ಇದ್ದವರಾಗಿದ್ದಾರೆ. ಕೇಂದ್ರ ಸರ್ಕಾರ ಲೋಕಸಭಾ ಅವಧಿ ವಿಸ್ತಾರ ಮಾಡಿ ಚುನಾವಣೆ ಮುಂದೂಡುವ ದುರುದ್ದೇಶವಿದೆ. ಮೋದಿ ಅವರು ಸಂವಿಧಾನ ಬದಲಿಸಿ ಲೋಕಸಭಾ ಚುನಾವಣೆ ಮುಂದೂಡಿದರೆ ಜನರು ಸುಮ್ಮನಿರಲ್ಲ. ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇರಬೇಕಿತ್ತು. ಪಕ್ಷಾತೀತವಿರುವ ಎಷ್ಟೊಂದು ಜನರಿದ್ದಾರೆ. ಅಂತವರ ನೇಮಕ ಮಾಡಿಕೊಳ್ಳಬೇಕಿತ್ತು. ಕೇಂದ್ರ ಸರ್ಕಾರದ ಹೆಜ್ಜೆಯಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಹೇಳಿದರು.
ಕರ್ನಾಟಕ ಚುನಾವಣೆ ಬಳಿಕ ಬಿಜೆಪಿ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಅವರ ಪರಿಸ್ಥಿತಿ ಹದಗೆಡುತ್ತಿದೆ. ಐದು ಗ್ಯಾರಂಟಿ ಯಶಸ್ಸು ನೋಡಿ ಕೇಂದ್ರ ಸರ್ಕಾರ ಭಯದಿಂದ ಬೆಲೆ ಇಳಿಕೆ ಮಾಡುತ್ತಿದೆ ಎಂದರು. ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ದೇವೆಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಹಿತ ರಕ್ಷಣೆಗೆ ಕಾನೂನು ಹೋರಾಟ ಮಾಡಿದ್ದೇವೆ. ಸರ್ವಪಕ್ಷ ಸಭೆ ಕರೆದು ಮಾರ್ಗದರ್ಶನ ಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕಾಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಹೈಕೋರ್ಟ್ ಗೆ ಮನವರಿಕೆ ಮಾಡಲು ಸಂಕಷ್ಟ ಸೂತ್ರ ಮಾಡುವುದು ಸರ್ಕಾರದ ಉದ್ದೇಶವಿದೆ. ಬಿಜೆಪಿ ನಾಯಕರು ಕಾಂಗ್ರೆಸ್ಗೆ ಬರಲು ಮುಂದಾಗಿದ್ದಾರೆ. ಸಮಾಜದಲ್ಲಿ ಬಡವರ ಪರವಾದ ಮನಸ್ಥಿತಿ ಇರುವವರು ಇಂಥಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಮಹದಾಯಿ ಯೋಜನೆ ಅನುಷ್ಠಾನ ಬಿಜೆಪಿ ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆ ಅನುಮತಿ ಕೊಡಿಸಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ತರುತ್ತದೆ. ಬಿಜೆಪಿ ನುಡಿದಂತೆ ನಡೆಯಬೇಕು. ರಾಜ್ಯದ ಜನರ ಹಿತಕ್ಕಾಗಿ ಅನುಮತಿ ಕೊಡಿಸಬೇಕು ಎಂದು ನುಡಿದರು.
ನಮಗೆ ನೀರು ಇಲ್ಲ- ಕೋನರೆಡ್ಡಿ : ಇನ್ನೊಂದೆಡೆ ಭಾನುವಾರ ನಗರದದಲ್ಲಿ ನಡೆದ ಬೆಣ್ಣೆ ಹಳ್ಳ ಶಾಶ್ವತ ಪರಿಹಾರ ಚಿಂತನ ಮಂಥನ ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕ ಎನ್ ಹೆಚ್ ಕೋನರೆಡ್ಡಿ, ಕಾವೇರಿ ಹಾಗೂ ಕೃಷ್ಣ ಎರಡೂ ರಾಜ್ಯದ ಕಣ್ಣು ಇದ್ದ ಹಾಗೆ. ಕರ್ನಾಟಕದಲ್ಲಿ ನೀರು ಇಲ್ಲದೇ ಇದ್ದಾಗ ತಮಿಳುನಾಡು, ಆಂಧ್ರಪ್ರದೇಶದವರು ನೀರು ಕೊಡಿ ಅಂತ ಕೇಳುತ್ತಾರೆ. ನಮಗೆ ನೀರು ಇಲ್ಲ, ನಿಮಗೆ ಹೇಗೆ ಕೊಡೋದು ಅಂತ ಹೇಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ನ್ಯಾಯಾಧೀಶರು ಹಾಗೂ ಆದೇಶ ಮಾಡಿದ ಬೋರ್ಡ್ ನೀರು ಇದೆಯಾ, ಇಲ್ಲವಾ ಅಂತ ಚೆಕ್ ಮಾಡಬೇಕು. ಕಾವೇರಿ ನೀರು ಕೇಳಿದರೆ ನಮ್ಮ ರೈತರು ಏನು ಮಾಡಬೇಕು? ನಮ್ಮ ರೈತರು ಎಲ್ಲಾ ಕಡೆ ಕಲ್ಲು ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ನೀರು ಇಲ್ಲದಿದ್ದಾಗ ನ್ಯಾಯಾಲಯದ ಆದೇಶ ಹೇಗೆ ಪಾಲಿಸಬೇಕು? ಇದು ಗಂಭೀರ ಸಮಸ್ಯೆ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿಯೋಗ ಮಾಡಿ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡುತ್ತಿದ್ದಾರೆ.
ಕೃಷ್ಣ ಕಣಿವೆ ಹಾಗೂ ತುಂಗಾ ಯೋಜನೆಗಳನ್ನು ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಬೇಕು. ರಾಜ್ಯ ಸರ್ಕಾರದಿಂದ ಮೂಲಭೂತ ಅಂಕಿ ಅಂಶಗಳನ್ನು ಎಲ್ಲಾ ಕೊಟ್ಟಾಗಿದೆ. ಮಹದಾಯಿ ಕೆಲಸ ಆಗಿಯೇ ಬಿಟ್ಟಿದೆ ಎಂದು ಬಿಜೆಪಿ ಅವರು ವಿಜಯೋತ್ಸವ ಮಾಡಿದರು. ಈಗ ಅವರೇ ಉತ್ತರ ಹೇಳುತ್ತಿಲ್ಲ. ಕೇಂದ್ರ ಸಚಿವ ಜೋಶಿ ಸಾಹೇಬ್ರನ್ನು ನಾವು ಬಿಡೋದೇ ಇಲ್ಲ, ನೀವು ಮಾಡಬೇಕು ಎಂದು ಬೆನ್ನು ಬೀಳುತ್ತೇವೆ. ಮಹದಾಯಿ ಜಾರಿ ಆಗುವವರೆಗೂ ಹೋರಾಟ ನಿರಂತರ ಎಂದು ಕೋನರೆಡ್ಡಿ ತಿಳಿಸಿದರು.
ಕೋನರೆಡ್ಡಿ ಕಾಂಗ್ರೆಸ್ ಗೆ ಬಂದ ನಂತರ ತುಂಬಾ ಮಾತನಾಡುತ್ತಿದ್ದಾರೆ ಎಂಬ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಜನತಾ ದಳದಲ್ಲಿದ್ದಾಗಲೂ ಮಾತಾಡಿದ್ದೇನೆ, ಈಗಲೂ ಮಾತಾಡ್ತಾ ಇದ್ದೇನೆ. ನಾನು ಮಾತಾಡೋದು ಬಿಟ್ಟಿದ್ದು ಯಾವಾಗ ಎಂದು ಪ್ರಶ್ನಿಸಿದರು.
ಬೆಣ್ಣೆಹಳ್ಳ ವಿಚಾರವಾಗಿ ಸರ್ಕಾರ ಚಿಂತನೆ ನಡೆಸಿದೆ - ಸಲೀಂ ಅಹ್ಮದ್ : ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೋರ್ಟ್ ನಿರ್ದೇಶನದ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ. ಬೆಣ್ಣೆಹಳ್ಳದ ವಿಚಾರವಾಗಿ ಹೋರಾಟ ನಡೀತಾ ಇದೆ. ಪರಿಹಾರ ಬಗ್ಗೆ ಚರ್ಚೆ ಮಾಡಲು ಸಭೆ ಹಮ್ಮಿಕೊಂಡಿದ್ದೇವೆ. ಪರಿಹಾರಕ್ಕೆ ಚಿಂತನೆ ಮಾಡುತ್ತಿದ್ದೇವೆ. ಚಿಂತನ ಮಂಥನ ಸಭೆ ನಡೆಯುತ್ತಿದೆ. ಸರ್ಕಾರ ಇದಕ್ಕೆ ಬದ್ಧವಾಗಿದೆ. ಬರಗಾಲ ವಿಷಯವಾಗಿ ಸಭೆ ಕರೆದಿದ್ದಾರೆ. ಎಷ್ಟು ತಾಲೂಕು ಅಂತ ರಿಪೋರ್ಟ್ ತರಿಸಿ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ ಎಂದರು.
ಇದನ್ನೂ ಓದಿ : ಆಪರೇಷನ್ ಆಗಲು ನನಗೆ ಕ್ಯಾನ್ಸರ್ ಆಗಿಲ್ಲ, ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: 'ಆಪರೇಷನ್ ಹಸ್ತ'ದ ಬಗ್ಗೆ ರಾಜುಗೌಡ ರಿಯಾಕ್ಷನ್