ಹುಬ್ಬಳ್ಳಿ: ಪರಿಹಾರ ಮೊತ್ತ ನೀಡದ ರಿಲಯನ್ಸ್ ವಿಮಾ ಕಂಪನಿಯ ಕಚೇರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ನೊಂದ ವ್ಯಕ್ತಿಯೊಂದಿಗೆ ವಕೀಲರು, ಅಧಿಕಾರಿಗಳು ದೇಶಪಾಂಡೆ ನಗರದಲ್ಲಿರುವ ಕಚೇರಿಗೆ ಆಗಮಿಸಿ ಕಂಪನಿಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಧಾರವಾಡದ ಮಾನಸಿಕ ಆಸ್ಪತ್ರೆಯ ಬಳಿ ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದ ಲಕ್ಷ್ಮಣ ಬಸಪ್ಪ ಹಳ್ಳಿಕೇರಿ ತಳವಾರ ಎಂಬಾತನಿಗೆ ಲಾರಿಯೊಂದು ಹಾಯ್ದು ತೀವ್ರವಾಗಿ ಗಾಯಗೊಂಡು, ನಾಲ್ಕು ತಿಂಗಳು ಆಸ್ಪತ್ರೆ ಪಾಲಾಗಿದ್ದರು. ಪ್ರಕರಣವನ್ನ ದಾಖಲಿಸಿದ್ದ ಕುಟುಂಬದವರಿಗೆ ಲಾರಿಯ ಜೊತೆ ರಿಲಯನ್ಸ್ ಕಂಪನಿ ವಿಮೆ ಒಪ್ಪಂದ ಮಾಡಿಕೊಂಡಿದ್ದರಿಂದ, ವಿಮೆ ಹಣವನ್ನ ಕೊಡುವಂತೆ ಕೋರ್ಟ್ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ 11,13,600 ರೂಪಾಯಿ ಹಾಗೂ ಘಟನೆ ನಡೆದ ದಿನದಿಂದ ಆದೇಶವಾದ ದಿನದವರೆಗೆ ಶೇಕಡಾ 9ರಷ್ಟು ಬಡ್ಡಿ ಹಣವನ್ನ ನೀಡುವಂತೆ ಹೇಳಿತ್ತು. ಆದರೆ ರಿಲಯನ್ಸ್ ಕಂಪನಿ, ಹಣವನ್ನ ಬಿಡುಗಡೆ ಮಾಡದೇ ಇರುವುದರಿಂದ, ನೊಂದ ಲಕ್ಷ್ಮಣ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಇಂದು ರಿಲಾಯನ್ಸ್ ಕಚೇರಿಯನ್ನ ಜಪ್ತಿ ಮಾಡಲು ಬಂದಿದ್ದು, ಕಚೇರಿಯಲ್ಲಿದ್ದ ಸಿಬ್ಬಂದಿಗಳನ್ನ ಹೊರ ಹಾಕಿ, ವಸ್ತುಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ನಡೆದಿದೆ.