ಹುಬ್ಬಳ್ಳಿ: ಗಣೇಶನನ್ನು ಸಾಮಾನ್ಯವಾಗಿ ಒಂದು ದಿನ, ಮೂರು, ಐದು, ಏಳು, ಒಂಭತ್ತು ಹಾಗೂ ಹನ್ನೊಂದು ದಿನಗಳವರೆಗೆ ಇಡಲಾಗುತ್ತದೆ. ಆದ್ರೆ ಕಲಘಟಗಿ ತಾಲೂಕಿನ ಕೆಲವು ಕಡೆ ಗಣೇಶ ಪ್ರತಿಷ್ಠಾಪನೆ ವಿಶೇಷತೆಯಿಂದ ಕೂಡಿದೆ. ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಅವರ ವಾಡೆದಲ್ಲಿ ಪ್ರತಿಷ್ಠಾಪನೆಗೊಳ್ಳುವ ಗಣಪತಿ ಅರ್ಧ ದಿನ ವಿರಾಜಮಾನವಾಗುವುದು ವೈಶಿಷ್ಟ್ಯತೆಯಿಂದ ಕೂಡಿದೆ.
ಇಲ್ಲಿನ ದೇಸಾಯಿ ಮನೆತನದವರು ಕೇವಲ ಅರ್ಧ ದಿನ ಮಾತ್ರ ಗಣಪತಿಯನ್ನು ಕೂರಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆ ಪ್ರತಿಷ್ಠಾಪನೆಗೊಳ್ಳುವ ಗಣಪ ಮಧ್ಯಾಹ್ನದ ವೇಳೆಗೆ ನಿಮಜ್ಜನವಾಗುತ್ತಾನೆ. ಇದಕ್ಕೆ ಐತಿಹಾಸಿಕ ಕಾರಣವೂ ಇದೆ.
ಅದು ಸ್ವಾತಂತ್ರ್ಯ ಪೂರ್ವಕಾಲ. ಕಲಘಟಗಿ ತಾಲೂಕಿನಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ತೀವ್ರ ಬರಗಾಲ ಆವರಿಸಿತ್ತು. ಅಂತಹ ನಾಡು ಬರ ಕಂಡಿರಲಿಲ್ಲ. ಉಪ್ಪಿಗೂ ಬ್ರಿಟಿಷರು ತೆರಿಗೆ ವಿಧಿಸಿದ್ದರು. ದೇಸಾಯಿ ಆಡಳಿತದ ಐದು ಹಳ್ಳಿಗಳು ಮತ್ತು ಸುತ್ತಲಿನ ಪ್ರದೇಶದ ಯಾರು ಕಂದಾಯ ಕಟ್ಟಿರಲಿಲ್ಲ. ಈ ವಿಷಯದಲ್ಲಿ ಬ್ರಿಟಿಷರಿಗೂ ದೇಸಾಯಿಯವರಿಗೂ ವಾಗ್ವಾದವಾಗಿತ್ತು. ಕಂದಾಯ ಅಧಿಕಾರಿ ಆಗ ದಾಸ್ತಿಕೊಪ್ಪದ ಬ್ರಿಟಿಷ್ ಬಂಗಲೆಯಲ್ಲಿ ಇರುತ್ತಿದ್ದ. ದೇಸಾಯಿಯವರ ಅಡಳಿತದಲ್ಲಿದ್ದ ಗ್ರಾಮದ ಮರಾಠಿ ಓಣಿಯ ಹಿತ್ತಲನ್ನು ವಿಭಾಗಿಸಿ ಅದನ್ನು ಗಂಜೀಗಟ್ಟಿ ಸರಹದ್ದಿನಲ್ಲಿಟ್ಟು ನಕಾಶೆಯನ್ನು ತಯಾರಿಸಿದ. ದೇಸಾಯಿಯವರು ಇರುವ ಗ್ರಾಮದ ವಿಸ್ತೀರ್ಣ ಕಡಿತಗೊಳಿಸಿ ಸೇಡು ತೀರಿಸಿಕೊಂಡ.
ಇದೇ ಸಂದರ್ಭದಲ್ಲಿ ಲೋಕಮಾನ್ಯ ತಿಲಕರು ಹುಬ್ಬಳ್ಳಿಗೆ ಬಂದಾಗ ಅವರು ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ವಿವರಿಸಿದ್ದರು. ಸಾರ್ವಜನಿಕವಾಗಿ ಗಣಪತಿ ಕೂರಿಸಿ ಜನರು ಹೇಗೆ ಬ್ರಿಟಿಷರ ವಿರುದ್ಧ ಒಂದಾಗಬಹುದೆಂದು ವಿವರಿಸಿದಾಗ ಇದರಿಂದ ಪ್ರೇರಿತರಾದ ದೇಸಾಯಿಯವರು, ಸಾರ್ವಜನಿಕವಾಗಿ ತಮ್ಮ ವಾಡೇದಲ್ಲಿ ಗಣೇಶ ಕೂರಿಸಿ ವಿಜೃಂಭಣೆಯಿಂದ ಐದು ದಿನಗಳ ಕಾರ್ಯಕ್ರಮ ನಡೆಸಿದರು. ಬರಗಾಲದ ವರ್ಷ ಗಣೇಶೋತ್ಸವದ ಸಂಭ್ರಮದ ತಯಾರಿ ನಡೆಸಿ ಬೆಳಿಗ್ಗೆ ಚೌತಿ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದರು. ಗ್ರಾಮಸ್ಥರಿಗೆ ತೀರ್ಥ ಪ್ರಸಾದ ವಿತರಿಸಲಾಗಿತ್ತು. ದೇಸಾಯಿಯವರು ಬ್ರಿಟಿಷ್ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆಂದು ಪಿತೂರಿಯಿಂದ ವಾಡೆಗೆ ಬ್ರಿಟಿಷ್ ಸೈನ್ಯ ದಾಳಿ ಮಾಡಿತು. ಆಗ ಗಣೇಶೋತ್ಸವವು ಬ್ರಿಟಿಷ್ ವಿರೋಧಿಯಾಗಿತ್ತು. ದಾಳಿ ಮಾಡಿದ್ದು ಮಧ್ಯಾಹ್ನ ಸಮಯ. ದೇಸಾಯಿಯವರು ಪ್ರಸಾದ ವಿತರಿಸಿ ಊಟಕ್ಕೆ ಕೂರುವ ತಯಾರಿಯಲ್ಲಿದ್ದಾಗ ದಾಳಿ ಮನೆ ಬಾಗಿಲಿಗೆ ಬಂದಿದೆ. ಬ್ರಿಟಿಷರು ಒಳ ಬಂದು ಗಣಪತಿಗೆ ಧಕ್ಕೆ ಮಾಡಬಹುದೆಂದು ಅಂದಾಜಿಸಿ ವಾಡೆದಲ್ಲಿರುವ ಹುಡೇದ ಬಾವಿಯಲ್ಲಿ ನಿಮಜ್ಜನ ಮಾಡಿ ಪಶ್ಚಿಮದ್ವಾರದ ಮುಖಾಂತರ ಭೂಗತರಾದರು. ಬ್ರಿಟಿಷರಿಗೆ ತಾವು ಬರುವ ಮುಂಚೆ ಏನು ನಡೆದಿದೆ ಎಂದು ಸುಳಿವು ದೊರಕಲಿಲ್ಲ. ಬ್ರಿಟಿಷ್ ಸೈನ್ಯ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತು.
ಭೋಗೇನಾಗರಕೊಪ್ಪ ಕೋಟೆಯ ಮೇಲೆ ನಡೆದ ದಾಳಿಯ ಇತಿಹಾಸ ಮರೆಯದ ದೇಶಕುಲಕರ್ಣಿ(ದೇಸಾಯಿ) ಅವರು ಇಂದಿಗೂ ಅರ್ಧ ದಿನ ಗಣಪನನ್ನು ಕೂರಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ಗಣಪತಿಯನ್ನು ಕೂರಿಸಿ ಪೂಜೆ, ಮಹಾನೈವೇದ್ಯ, ಮಹಾಮಂಗಳಾರತಿ ನಂತರ ಮಧ್ಯಾಹ್ನದ ಊಟಕ್ಕೂ ಮುನ್ನವೇ ನಿಮಜ್ಜನ ಮಾಡುತ್ತಾರೆ ಎಂದು ಮನೆತನದ ಹಿರಿಯರಾದ ಬಸವಂತರಾವ್ ದೇಶಕುಲಕರ್ಣಿ ಹಾಗೂ ರಾಮಚಂದ್ರ ದೇಶಕುಲಕರ್ಣಿ ಇತಿಹಾಸ ನೆನಪಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬವೊಂದು ಪರಂಪರಾಗತವಾಗಿ ಬಂದ ಭಕ್ತಿಗೂ ಧಕ್ಕೆ ಆಗದಂತೆ, ಬ್ರಿಟಿಷರಿಗೂ ಮಣಿಯದಂತೆ ದೇಶಭಕ್ತಿಯನ್ನು ಇಂದಿಗೂ ಮೆರೆಯುತ್ತಿರುವುದು ವಿಶೇಷ.