ಹುಬ್ಬಳ್ಳಿ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು.
ಹುಬ್ಬಳ್ಳಿಯ ಕೋಟಿಲಿಂಗನಗರಕ್ಕೆ ಭೇಟಿ ನೀಡಿದ ಸಚಿವರು ಕುಡಿಯುವ ನೀರಿನ ಕಾಮಗಾರಿ ವೀಕ್ಷಿಸಿದರು. ನಗರದ ನ್ಯೂ ಕಾಟನ್ ಮಾರ್ಕೆಟ್ , ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಕಚೇರಿಯ ಬಳಿ ಸಿ.ಆರ್.ಎಫ್ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ. ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಸಚಿವರು , ಲೋಕೋಪಯೋಗಿ ಹಾಗೂ ಮಹಾನಗರ ಪಾಲಿಕೆ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಸಣ್ಣ ಪಟ್ಟ ತೊಂದರೆಗಳಿಂದ ಕಾಮಗಾರಿ ಕುಂಠಿತಗೊಳ್ಳಬಾರದು ಎಂದರು.
ಪ್ರತಿಯೊಂದು ಹಂತದಲ್ಲೂ ಮಂತ್ರಿಗಳು ಸ್ವತಃ ಆಗಮಿಸಿ ಕಾಮಗಾರಿ ತ್ವರಿತಗೊಳಿಸಲು ಹೇಳುವಂತೆ ಆಗಬಾರದು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕು. ಅನಗತ್ಯವಾಗಿ ಮರಗಳನ್ನು ಕಡಿಯಬೇಡಿ. ಬೆಂಗಳೂರು ಮಾದರಿಯಲ್ಲಿ ಮರಗಳನ್ನು ಉಳಿಸಿ ರಸ್ತೆ ನಿರ್ಮಿಸಿ , ತಾಂತ್ರಿಕ ತೊಂದರೆಗಳು, ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸನಿರ್ವಹಿಸದ್ದರೆ, ಗಮನಕ್ಕೆ ಅವುಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೋಪನಕೊಪ್ಪ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಂಸದರ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶಾಲಾ ಕೊಠಡಿಗಳನ್ನು ಕಾಮಗಾರಿಯನ್ನು ವೀಕ್ಷಿಸಿದರು. ಸ್ಮಾಟ್ ಸಿಟಿ ಯೋಜನೆಯಡಿ ರಾಜಾಜಿ ನಗರ ಸರ್ಕಲ್ ದೇವಾಂಗ ಪೇಟೆಯ ಬಳಿ ನಿರ್ಮಿಸಲಾಗುತ್ತಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿ ಪರಿಶೀಲನೆ ನಡೆಸಿದರು.