ಹುಬ್ಬಳ್ಳಿ: ಪ್ರಸ್ತುತ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಹೊಸ ದಾರಿ ಹುಡುಕಿಕೊಂಡಿದೆ. ಆದರೆ ಇಷ್ಟುದಿನ ತನ್ನ ವಾಹನಗಳಿಗಷ್ಟೇ ವಾಯು ಮಾಲಿನ್ಯ ತಪಾಸಣೆ ಪರೀಕ್ಷೆಗೆ ಸೀಮಿತವಾಗಿದ್ದ ವಾಯವ್ಯ ಸಾರಿಗೆ ಸಂಸ್ಥೆ ಇದೀಗ ಖಾಸಗಿ ವಾಹನಗಳಿಗೂ ಪಿಯುಸಿ ಕೇಂದ್ರ ತೆರೆಯಲೂ ಮುಂದಡಿ ಇಟ್ಟಿದೆ. ಇದರಿಂದ ತನ್ನ ಆದಾಯ ಹೆಚ್ಚಿಸಿಕೊಳ್ಳಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ಹಲವಾರು ವರ್ಷಗಳಿಂದ ವಾಯವ್ಯ ಸಾರಿಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೂ ಎನ್ಡಬ್ಲುಕೆಆರ್ಟಿಸಿಯೂ ಸಾರಿಗೆ ಸಂಚಾರ ಜತೆಗೆ ಬಸ್ ನಿಲ್ದಾಣಗಳ ಅಂಗಡಿ ಮುಂಗಟ್ಟು, ವಿವಿಧ ಕಡೆಯಿಂದ ಹೆಚ್ಚು ಆದಾಯ ಗಳಿಸಲೂ ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದೆ.
ಪಿಯುಸಿ ಟೆಸ್ಟ್‌ಗೆ ಡಿಮ್ಯಾಂಡ್: ಕೇಂದ್ರ ಮೋಟಾರು ವಾಹನಗಳ ನಿಯಮ 1989 ರಡಿ ಭಾರತ ಸರ್ಕಾರವು ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಅಥವಾ PUC ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದ್ದೂ ಹೀಗಾಗಿ ಈ ಕೇಂದ್ರಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ. ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿಸಿಕೊಂಡು ಸರ್ಕಾರದ ಆಧೀನದ ಸಾರಿಗೆ ಸಂಸ್ಥೆಯೂ ಖಾಸಗಿ ವಾಹನಗಳ ಪಿಯುಸಿ ಟೆಸ್ಟ್ ಸೆಂಟರ್ ತೆರೆಯುತ್ತಿರುವುದು ರಾಜ್ಯದಲ್ಲೇ ಮೊದಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಬೆಳಗಾವಿ, ಶಿರಸಿ,ಬಾಗಲಕೋಲ, ಚಿಕ್ಕೋಡಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 6 ಜಿಲ್ಲೆಗಳ 9 ವಿಭಾಗ ದೊಡ್ಡ ನಿಗಮ ಎನ್ಡಬ್ಲುಕೆಆರ್ಟಿಸಿ. ಇದು ಬರೋಬ್ಬರಿ 22500ಕ್ಕೂ ಅಧಿಕ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ನಿಗಮ ಮಾತ್ರ ಲಾಭದತ್ತ ಬರುತ್ತಲೇ ಇಲ್ಲ. ವರ್ಷದಿಂದ ವರ್ಷಕ್ಕೆ ನಷ್ಟು ಅನುಭವಿಸುತ್ತ ಮುಂದೆ ಸಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ವಿಶೇಷ ಅನುದಾನ 1100 ಕೋಟಿಯನ್ನೂ ನೀಡುವಂತೆ ಸಂಸ್ಥೆ ಕೇಳಿತ್ತು.
ಆದರೆ ರಾಜ್ಯ ಸರ್ಕಾರ ಇದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಕೆಲವೊಂದಿಷ್ಟು ಜಾಗ, ಕಟ್ಟಡಗಳನ್ನು ಲೀಸ್ ಮೇಲೆ ನೀಡಲು ನಿರ್ಧರಿಸಿತ್ತು. ಅದಾದ ಬಳಿಕ ಇದೀಗ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ. ಅದೇ ಪಿಯುಸಿ ಟೆಸ್ಟಿಂಗ್.
ಖಾಸಗಿ ವಾಹನಕ್ಕೆ 150 ದರ ನಿಗದಿ: ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರ ತೆರೆಯಲಾಗಿದೆ.ಇದರಿಂದ ತನ್ನ ಸಂಸ್ಥೆಗಳ ಬಸ್ ಸೇರಿದಂತೆ ಸಂಸ್ಥೆಯ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಲು ಅನುಕೂಲವಾಗುತ್ತಿದೆ. ಇದರೊಂದಿಗೆ ಖಾಸಗಿ ವಾಹನಗಳಿಗೂ ಇಲ್ಲಿ ತಪಾಸಣೆ ಮಾಡಲಾಗುತ್ತಿದೆ. ಇಲ್ಲಿ ಪ್ರತಿ ಖಾಸಗಿ ವಾಹನಕ್ಕೆ 150 ದರ ನಿಗದಿಪಡಿಸಿದೆ. ಪ್ರತಿದಿನ ಕನಿಷ್ಠವೆಂದರೂ 100 ಖಾಸಗಿ ವಾಹನಗಳಾದರೂ ಪಿಯುಸಿ ಟೆಸ್ಟಿಂಗ್ ಮಾಡಿಸಿಕೊಳ್ಳಬಹುದು ಎಂದು ಅಂದಾಜಿಸಿದೆ. ಇದರ ಸಂಖ್ಯೆ ಇನ್ನಷ್ಟು ಜಾಸ್ತಿಯಾಗಬಹುದು. ಇದರಿಂದ ಸಂಸ್ಥೆಯ ಆದಾಯವೂ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಸಂಸ್ಥೆಯದ್ದಾಗಿದೆ.
ರಾಜ್ಯದಲ್ಲೇ ಇದು ಮೊದಲು: ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿವೆ. ಆದರೆ ಎಲ್ಲಡೆ ಬರೀ ಸಂಸ್ಥೆಯ ಬಸ್ ಹಾಗೂ ವಾಹನಗಳಿಗೆ ತಪಾಸಣೆಗೆ ಮಾತ್ರ ಪಿಯುಸಿ ಟೆಸ್ಟ್ ನಡೆಯುತ್ತಿದೆ. ಆದರೆ ವಾಯವ್ಯ ಸಾರಿಗೆ ಸಂಸ್ಥೆಯೂ ಇದೀಗ ಖಾಸಗಿ ವಾಹನಗಳ ಪಿಯುಸಿ ಟೆಸ್ಟಿಂಗ್‌ಗೆ ಮುಂದಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಖಾಸಗಿ ವಾಹನಗಳಿಗೂ ಪಿಯುಸಿ ಟೆಸ್ಟಿಂಗ್ ಹುಬ್ಬಳ್ಳಿಯಲ್ಲಿ ತೆರೆಯಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಾಚಾರ್ಯ ಬೋರಲಿಂಗಯ್ಯ ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಾರಿಗೆ ಸಂಸ್ಥೆ ಆದಾಯ ಹೆಚ್ಚಿಸಿಕೊಳ್ಳಲು ಮುಂದಡಿ ಇಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಆದಾಯ ಆದಾಯ ಹೆಚ್ಚಾಗಿ ಇಲಾಖೆ ಪ್ರಗತಿ ಪಥದತ್ತ ಸಾಗಲಿ ಎಂಬುದು ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಆಶಯವಾಗಿದೆ.
ಇದನ್ನೂಓದಿ:120 ಕೆಜಿ ತೂಕದ ಬೈಕ್ ಹೊತ್ತು 30 ಸೆಕೆಂಡ್‌ನಲ್ಲಿ 100 ಮೀಟರ್ ಸಾಗಿದ ಪರಾಕ್ರಮಿ!