ಹುಬ್ಬಳ್ಳಿ : ಸಾರಿಗೆ ಬಸ್ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಒಡವೆ ಹಾಗೂ ನಗದು ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ ಮತ್ತು ಚಾಲಕರನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅವರು ಅಭಿನಂದಿಸಿದ್ದಾರೆ.
ಉತ್ತರ ಕನ್ನಡ ವಿಭಾಗದ ಕಾರವಾರ ಬಸ್ ಡಿಪೋ ನಿರ್ವಾಹಕ ಹರೀಶ್ ಎನ್. ಹಾಗೂ ಚಾಲಕ ಸ್ಟೀಫನ್ ಫರ್ನಾಂಡೀಸ್ ಅವರು ಪ್ರಯಾಣಿಕರಿಗೆ 3.5 ರೂ. ಮೌಲ್ಯದ ಒಡವೆ, 1 ಲಕ್ಷ ರೂ. ನಗದು ಹಣ ಹಿಂದಿರುಗಿಸುವ ಮೂಲಕ ವ್ಯವಸ್ಥಾಪಕ ನಿರ್ದೇಶಕರಿಂದ ಅಭಿನಂದನೆಗೆ ಪಾತ್ರರಾದ ಚಾಲನಾ ಸಿಬ್ಬಂದಿಯಾಗಿದ್ದಾರೆ.
ಮೇ 29ರಂದು ಕಾರವಾರ ಡಿಪೊಗೆ ಸೇರಿದ ಬಸ್ ಚಿಕ್ಕಮಗಳೂರಿನಿಂದ ಕಾರವಾರಕ್ಕೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕುಮಟಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆಗ ಕಾರವಾರ ನಿವಾಸಿ ಅಬ್ದುಲ್ ಸತ್ತಾರ್ ಶೇಖ್ ಕುಟುಂಬದೊಂದಿಗೆ ಕಾರವಾರಕ್ಕೆ ಹೋಗಲು ತಮ್ಮ ಲಗೇಜ್ ಬ್ಯಾಗ್ಗಳೊಂದಿಗೆ ಬಸ್ ಹತ್ತಿದ್ದರು. ಆದರೆ ಬಸ್ ಫುಲ್ ಆಗಿದ್ದರಿಂದ ಕುಳಿತುಕೊಳ್ಳಲು ಆಗುವುದಿಲ್ಲವೆಂದು ಭಾವಿಸಿ, ಇಳಿದು ಬೇರೊಂದು ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಬಸ್ನಿಂದ ಇಳಿಯುವಾಗ ಬ್ಯಾಗ್ ಬಿಟ್ಟು ತೆರಳಿದ್ದರು. ಸೀಟ್ ಮೇಲಿದ್ದ ಬ್ಯಾಗ್ ಅನ್ನು ನಿರ್ವಾಹಕ ಹರೀಶ್ ಗಮನಿಸಿದ್ದರು.
ಬಳಿಕ ಅಕ್ಕಪಕ್ಕದ ಪ್ರಯಾಣಿಕರನ್ನು ವಿಚಾರಿಸಿದಾಗ ತಮ್ಮದಲ್ಲ ಎಂದಿದ್ದಾರೆ. ನಂತರ ಸಹೋದ್ಯೋಗಿ ಚಾಲಕ ಸ್ಟೀಫನ್ ಫರ್ನಾಂಡೀಸ್ ಜೊತೆ ನೋಡಲಾಗಿ ಅದರಲ್ಲಿ ಚಿನ್ನದ ಒಡವೆ ಹಾಗೂ ನಗದು ಹಣ ಇರುವುದು ಕಂಡುಬಂದಿತ್ತು. ಕುಮಟಾ ಬಸ್ ನಿಲ್ದಾಣದಲ್ಲಿ ಒಂದು ಕುಟುಂಬ ಬಸ್ ಹತ್ತಿ, ಕೆಲಹೊತ್ತಲ್ಲೇ ಇಳಿದದ್ದನ್ನು ನೆನಪಿಸಿಕೊಂಡ ಸಿಬ್ಬಂದಿ, ಬ್ಯಾಗ್ನ್ನು ಡಿಪೊಗೆ ತಲುಪಿಸಿ ಮೇಲಾಧಿಕಾರಿಗಳ ಮೂಲಕ ವಾರಸುದಾರರಿಗೆ ಹಿಂದುರುಗಿಸಲು ನಿರ್ಧರಿಸಿದ್ದರು.
ಅಷ್ಟರಲ್ಲಿ ಬೇರೊಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಸತ್ತಾರ್ ಶೇಖ್ ಅವರು ಟಿಕೆಟ್ ಪಡೆಯಲು ಹಣ ತೆಗೆಯಲು ನೋಡಿದಾಗ ಒಡವೆ ಹಾಗೂ ನಗದು ಹಣವಿದ್ದ ಬ್ಯಾಗ್ನ್ನು ಕಾರವಾರ ಡಿಪೋ ಬಸ್ನಲ್ಲಿಯೇ ಬಿಟ್ಟು ಬಂದಿರುವುದು ಗೊತ್ತಾಗಿತ್ತು. ಗಾಬರಿಯಾಗಿ ಕೂಡಲೇ ಕುಮಟಾ ಬಸ್ ನಿಲ್ದಾಣದ ಅಧಿಕಾರಿಗಳ ಮೂಲಕ ಹರೀಶ್ರನ್ನು ಸಂಪರ್ಕಿಸಿದಾಗ ಬ್ಯಾಗ್ ಸುರಕ್ಷಿತವಾಗಿರುವುದು ತಿಳಿದು ನಿಟ್ಟುಸಿರುಬಿಟ್ಟಿದ್ದರು. ಬಳಿಕ ಕಾರವಾರ ಬಸ್ ಡಿಪೋಗೆ ತೆರಳಿ ಅಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗ್ ಮರಳಿ ಪಡೆದಿದ್ದರು.
''ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಹಾಗೂ ನಗದು ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕರು ಇತರರಿಗೆ ಮಾದರಿಯಾಗಿದ್ದಾರೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆ, ಸದಾಭಿಪ್ರಾಯ ಇನ್ನಷ್ಟು ಹೆಚ್ಚಾಗಲು ಕಾರಣರಾಗಿದ್ದಾರೆ'' ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮೆಚ್ಚುಗೆ ಸೂಚಿಸಿದ್ದಾರೆ.
ಅಭಿನಂದನೆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ವಿಜಯಶ್ರೀ ನರಗುಂದ, ಜಗದಂಬಾ, ಎಚ್. ರಾಮನಗೌಡರ, ಶಶಿಧರ ಕುಂಬಾರ, ಐ.ಎ. ಕಂದಗಲ್ಲ, ದಶರಥ ಕೆಳಗೇರಿ ಮತ್ತಿತರರು ಇದ್ದರು.
ಇದನ್ನೂ ಓದಿ : ಯುವನಿಧಿ ಯೋಜನೆ ಜಾರಿಗೊಳಿಸಿ ಸರ್ಕಾರ ಆದೇಶ : ಷರತ್ತು ಮತ್ತು ನಿಬಂಧನೆಗಳು ಹೀಗಿವೆ..