ಹುಬ್ಬಳ್ಳಿ: ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ. ಸದ್ಯ ನಾನು ಬಿಜೆಪಿ ಪಕ್ಷ ಬಿಡುವ ವಿಚಾರದಲ್ಲಿ ಇಲ್ಲ. ಆದರೆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಿದೆ. ವಿಜೃಂಭಣೆಯಿಂದ ಗಣೇಶ ಮೆರವಣಿಗೆ ಮಾಡಿದ್ದೇವೆ. ಈದ್ಗಾ ಗಣೇಶೋತ್ಸವ ಹೋರಾಟದಲ್ಲಿ ಭಾಗಿಯಾಗದಿರುವುದಕ್ಕೆ ಕಾರಣ ಕಾನ್ಫರೆನ್ಸ್ ಇದ್ದಿದ್ದರಿಂದ ನಾನು ಬೇರೆ ಊರಿಗೆ ಹೋಗಿದ್ದೆನು. ಹೀಗಾಗಿ ಹೋರಾಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಪಂಜಾಬ್, ರಾಜಸ್ಥಾನ ರಾಜ್ಯಗಳಿಗೆ ಹೋಗಿದ್ದೆನು. ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಮುಂಚಿತವಾಗಿಯೇ ನಾನು ಜಿಲ್ಲಾಧ್ಯಕ್ಷರಿಗೆ ಹೇಳಿದ್ದೆ ಎಂದು ತಿಳಿಸಿದರು.
ಬಿಜೆಪಿ ಟಿಕೆಟ್ಗಳು ಮಾರಾಟಕ್ಕೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಇದರ ಬಗ್ಗೆ ದೊಡ್ಡವರು ಮಾತನಾಡುತ್ತಾರೆ. ಚೈತ್ರಾ ಕುಂದಾಪುರ ವಿರುದ್ಧ ತನಿಖೆ ನಡೆಯುತ್ತಿದೆ. ಯಾವ ಪಕ್ಷದವರೇ ಮಾಡಿದರೂ ತನಖೆಯಿಂದ ಅದು ಹೊರ ಬರಲೇಬೇಕು ಎಂದರು.
ಜಗದೀಶ್ ಶೆಟ್ಟರನ್ನು ಯಾರು ಹೆಚ್ಚು ಬೈತಾರೋ ಅವರೇ ವಿರೋಧ ಪಕ್ಷದ ನಾಯಕರಾಗ್ತಾರೆ ಅನ್ನೋ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಅದನ್ನು ಮಾಡಿಕೊಂಡಿದ್ದಾರೆ. ಮೋದಿಯವರನ್ನು ಪ್ರಧಾನಿ ಮಾಡಲು ಹೇಗೆ ಅನುಕೂಲ ಆಗುತ್ತೋ ಆ ರೀತಿ ಮಾಡಿರುತ್ತಾರೆ. ವಾಜಪೇಯಿ ಕಾಲದಿಂದಲೂ ಸಣ್ಣ ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಿದೆ ಎಂದು ಹೇಳಿದರು.
ಧಾರವಾಡ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಮುಖಂಡರ ಟಾರ್ಗೆಟ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಚೈತ್ರಾ ಕುಂದಾಪುರ ಸೇರಿ ಎಲ್ಲರ ಬಗ್ಗೆಯೂ ತನಿಖೆಯಿಂದ ಗೊತ್ತಾಗಲಿದೆ ಎಂದು ತಿಳಿಸಿದರು.
ಈದ್ಗಾ ಮೈದಾನದಲ್ಲಿ ಗಣಪತಿ ವಿರಾಜಮಾನ: ಸಾಕಷ್ಟು ವಿರೋಧದ ನಡುವೆ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಹಿಂದೂಪರ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸದ್ಯ ಮೈದಾನದ ಸುತ್ತಮುತ್ತ ಹು-ಧಾ ಪೊಲೀಸ್ ಕಮೀಷನರೇಟ್‌ನಿಂದ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಅವಳಿನಗರದಲ್ಲಿ ಪಾಲಿಕೆಯಡಿ 1500 ಹಾಗೂ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 500 ಸೇರಿ ಒಟ್ಟು 2000 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗಣೇಶೋತ್ಸವ ಮುಗಿಯುವವರೆಗೆ ಹೆಚ್ಚಿನ ಭದ್ರತೆಗಾಗಿ ಐದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ, ತೆನೆ ಹಬ್ಬ ಸಂಭ್ರಮ