ಹುಬ್ಬಳ್ಳಿ : ಪ್ರಯಾಣಿಕರ ಬಹುದಿನಗಳ ಬೇಡಿಕೆ ಹಿನ್ನೆಲೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ಮತ್ತು ರಾಣೆಬೆನ್ನೂರು ನಡುವೆ ತಡೆರಹಿತ ಬಸ್‌ಗಳ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್‌ಗಳು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡಲಿವೆ.
ಹುಬ್ಬಳ್ಳಿಯಿಂದ ರಾಣೆಬೆನ್ನೂರು ಮೂಲಕ ಸಂಚರಿಸುತ್ತಿರುವ ವೇಗದೂತ ಬಸ್ಗಳಿಗೆ ಮಾರ್ಗ ಮಧ್ಯದಲ್ಲಿ ಹಲವಡೆ ನಿಲುಗಡೆ ನೀಡಲಾಗುತ್ತಿದೆ. ಅಲ್ಲದೇ ಮುಖ್ಯ ರಸ್ತೆಯಿಂದ ಊರುಗಳ ಒಳಗಿನ ಬಸ್ ನಿಲ್ದಾಣಗಳಿಗೆ ಹೋಗಿ ಬರುತ್ತವೆ. ಇದರಿಂದ ಪ್ರಯಾಣದಲ್ಲಿ ಸ್ವಲ್ಪ ಕಿರಿಕಿರಿ ಅನುಭವ ಎನಿಸುತ್ತಿತ್ತು.
ಇದನ್ನು ತಪ್ಪಿಸಲೆಂದೇ ತಡೆ ರಹಿತ ಬಸ್‌ಗಳು ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಪಾಸ್ ಮೂಲಕ ಸಂಚರಿಸಲಿವೆ. ಪ್ರಯಾಣದ ಅವಧಿಯಲ್ಲಿ ಅರ್ಧ ಗಂಟೆ ಸಮಯ ಸಹ ಉಳಿತಾಯವಾಗಲಿದೆ. ಇದರೊಂದಿಗೆ ಮಾರ್ಗ ಮಧ್ಯದ ಊರುಗಳಲ್ಲಿನ ಸಂಚಾರ ದಟ್ಟಣೆ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಕಾಯುವ ಕಿರಿಕಿರಿ ಸಹ ತಪ್ಪಲಿದೆ.
ಇದರಿಂದ ತಡೆರಹಿತ, ಅರಾಮದಾಯಕ ಪ್ರಯಾಣದ ಅನುಭವ ದೊರೆಯುತ್ತದೆ. ವಾಣಿಜ್ಯ-ವ್ಯವಹಾರ ಮತ್ತಿತರ ಅಗತ್ಯದ ಕೆಲಸ ಕಾರ್ಯಗಳಿಗಾಗಿ ನಿತ್ಯ ಅಥವಾ ಮೇಲಿಂದ ಮೇಲೆ ಹುಬ್ಬಳ್ಳಿ-ರಾಣೆಬೆನ್ನೂರು ನಡುವೆ ಸಂಚರಿಸುವ ಸಾವಿರಾರು ಸಾರ್ವಜನಿಕರಿಗೆ ಇದು ಅನುಕೂಲಕರವಾಗಲಿದೆ.
ಈಗಾಗಲೇ, ಹುಬ್ಬಳ್ಳಿಯಿಂದ ಗದಗ, ಬೆಳಗಾವಿ, ಹಾವೇರಿ ಮತ್ತಿತರ ಸ್ಥಳಗಳ ನಡುವೆ ತಡೆರಹಿತ ಬಸ್‌ಗಳ ಕಾರ್ಯಾಚರಣೆ ಮಾಡುತ್ತಿದೆ. ಅಪಾರ ಜನಮೆಚ್ಚುಗೆ ಗಳಿಸಿವೆ. ಈ ಹಿನ್ನೆಲೆ ಇದೀಗ ಹುಬ್ಬಳ್ಳಿ-ರಾಣೆಬೆನ್ನೂರು ನಡುವೆ ತಡೆರಹಿತ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ಹುಬ್ಬಳ್ಳಿ-ರಾಣೆಬೆನ್ನೂರು ನಡುವೆ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಅರ್ಧ ಗಂಟೆಗೊಂದರಂತೆ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.