ಧಾರವಾಡ: ರಸ್ತೆ ಹಾಗೂ ರಾಜಕೀಯದ ಬಗ್ಗೆ ಪರ್ತಕರ್ತರಿಂದ ಪ್ರಶ್ನೆಗಳು ಬರುತ್ತಿದ್ದಂತೆಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಟಿಯನ್ನು ಅರ್ಧಕ್ಕೆ ಬಿಟ್ಟು ರಾಜಕೀಯದ ಬಗ್ಗೆ ನೋ ರಿಯಾಕ್ಷನ್ ಎಂದು ಎದ್ದು ಹೋದ ಘಟನೆ ನಡೆಯಿತು.
ಧಾರವಾಡದಲ್ಲಿ ರಸ್ತೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೂ ಒಳ್ಳೆಯ ರಸ್ತೆಗಳನ್ನು ಕೊಡಲು ನಾವು ಸಿದ್ಧವಾಗಿದ್ದೇವೆ. ಅವಳಿ ನಗರ ಸೇರಿ ಕೆಲವು ಪ್ರಮುಖ ರಸ್ತೆಗಳಿಗಾಗಿ ಸಿಆರ್ಎಫ್ನಲ್ಲಿ 300 ಕೋಟಿ ರೂಪಾಯಿ ಮಂಜೂರಾಗಿದೆ. ಈ ಹಿಂದಿನ ಸರ್ಕಾರದಲ್ಲಿ ದುರಸ್ತಿಗೆ ಅಧಿಕೃತ ಹಣ ಮಂಜೂರು ಆಗಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಅನುಮೋದನೆ ಲಭಿಸಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ ಆರಂಭಗೊಳ್ಳಲಿದ್ದು, ಮುಂದಿನ ವಾರವೇ ಕಾಮಗಾರಿಗೆ ಪೂಜೆ ಮಾಡ್ತೇವೆ ಎಂದರು.
ಧಾರವಾಡ ನಗರದ ಜ್ಯುಬಿಲಿ ಸರ್ಕಲ್ನಿಂದ ನರೇಂದ್ರ ಬೈಪಾಸ್ವರೆಗಿನ ರಸ್ತೆ ಕಾಮಗಾರಿಯೂ ಡಿಸೆಂಬರ್ ಒಳಗೆ ಮುಗಿಯುತ್ತೇ ಎಂದ ಜೋಶಿ, ಈ ಸಂಬಂಧ ನಾವು ಪ್ರತಿವಾರವೂ ಸಭೆಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.