ಹುಬ್ಬಳ್ಳಿ: ಡಂಬಳ ಎಂಟರ್ಪ್ರೈಸಸ್ ಪ್ರೈ.ಲಿ ವತಿಯಿಂದ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ನಾರ್ಥ್ ಕರ್ನಾಟಕ ಪ್ರಿಮಿಯರ್ ಲೀಗ್ (ಎನ್ಕೆಪಿಎಲ್)ಗಾಗಿ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಫೆ.22 ರಂದು ಇಲ್ಲಿನ ವಿದ್ಯಾನಗರದ ವೇಮನ ವಿದ್ಯಾವರ್ಧಕ ಸಂಘದ ಕೆ ಹೆಚ್ ಪಾಟೀಲ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎನ್ಕೆಪಿಎಲ್ನ ಸಂಸ್ಥಾಪಕ ಸಿದ್ದಾರ್ಥ ಡಂಬಳ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತರ ಕರ್ನಾಟಕದ 15 ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಕಲಬುರಗಿ, ಕಾರವಾರ, ಕೊಪ್ಪಳ, ಬೀದರ್, ಯಾದಗಿರಿ ಹಾಗೂ ರಾಯಚೂರಿನ ಕ್ರೀಡಾಪಟುಗಳು ಭಾಗವಹಿಸಬಹುದು. ಇನ್ನೂ ಸುಮಾರು 250ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಮುಂದಿನ ಹಂತದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಅಲ್ಲಿಂದ ನೇರ ಕ್ರೀಡಾಪಟುಗಳನ್ನು ಎನ್ಕೆಪಿಎಲ್ನ ಪ್ರಥಮ ಆವೃತ್ತಿಯಲ್ಲಿ ಕಣಕ್ಕಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದೆ. ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಗೆ ಯಾವುದೇ ಶುಲ್ಕ, ವಯೋಮಿತಿ ಇರುವುದಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಕ್ರೀಡಾ ಮಾನದಂಡದ ಪ್ರಕಾರ ದೇಹದ ತೂಕ 85 ಕೆಜಿ ಹೊಂದಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಆಧಾರ್ಕಾರ್ಡ್, ಎರಡು ಪಾಸ್ಪೋರ್ಟ್ ಸೈಜ್ ಫೋಟೋ ತೆಗೆದುಕೊಂಡು ಬರಬೇಕು. ಫೆ.22ರಂದು ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ ಸಿ ರಮೇಶ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎ.ಮುನಿರಾಜು ಹಾಗೂ ತೀರ್ಪುಗಾರ ಮಂಡಳಿಯ ಕಾರ್ಯಾಧ್ಯಕ್ಷ ಎಂ.ಷಣ್ಮುಗಂ ಆಯ್ಕೆಗಾರರಾಗಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಎನ್ಕೆಪಿಎಲ್ ಆಡಳಿತ ಮಂಡಳಿ ಸದಸ್ಯ ಕೆ ಹೆಚ್ ಪಾಟೀಲ್ ಸೇರಿದಂತೆ ಮುಂತಾದ ಗಣ್ಯರು ಆಗಮಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಡಂಬಳ, ಮಹೇಶ ಡಂಬಳ, ಅನಿಲಕುಮಾರ ಪಾಟೀಲ, ರಾಜಣ್ಣಾ ಕೊರವಿ, ಎಂ ಮಹದೇವಸ್ವಾಮಿ ಸೇರಿ ಮುಂತಾದವರು ಇದ್ದರು.