ಧಾರವಾಡ: ಹೊಸ ವರ್ಷಾಚರಣೆ ಜನದಟ್ಟಣೆ ನಿಯಂತ್ರಿಸಲು ಧಾರವಾಡದಲ್ಲಿ ಜನರ ಮೇಲೆ ನಿಗಾ ಇಡಲು ವಿಶೇಷ ದಳ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಒಳಗೊಂಡ ವಿಶೇಷ ದಳ ರಚಿಸಲಾಗಿದೆ. ಹೋಟೆಲ್, ಬಾರ್, ಡಾಬಾ ಎಂದಿನಂತೆ ತೆರೆಯಲು ಅವಕಾಶವಿದ್ದು, ನಿಯಮ ಉಲ್ಲಂಘಿಸಿ ಸಮಯ ಮೀರಿ ಕಾರ್ಯನಿರ್ವಹಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಎರಡು ಬಗೆಯ ಕೇಸ್ ದಾಖಲು ಮಾಡಲು ನಿರ್ಧರಿಸಲಾಗಿದೆ. ಅಂದರೆ ಒಂದು ಅಬಕಾರಿ ಕೇಸ್ ಮತ್ತೊಂದು ಪೊಲೀಸ್ ಕೇಸ್ ದಾಖಲು ಮಾಡಲು ನಿರ್ಧಾರ ಮಾಡಿದ್ದು, ರಾತ್ರಿಯಿಡೀ ಜಿಲ್ಲೆಯ ವಿವಿಧೆಡೆ ವಿಶೇಷ ದಳಗಳು ಗಸ್ತು ಮಾಡಿ ಬಾರ್, ಹೊಟೇಲ್, ಡಾಬಾಗಳ ಮೇಲೆ ನಿಗಾ ವಹಿಸುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.