ಧಾರವಾಡ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನೂತನ ಕಟ್ಟಡ ಇನ್ನೆರಡು ತಿಂಗಳಲ್ಲಿ ಉದ್ಘಾಟನೆ ಕಾಣುವ ನಿರೀಕ್ಷೆಯಲ್ಲಿದೆ. ಇದರಿಂದ ವಿದ್ಯಾಕಾಶಿ ಎಂಬ ಕಿರೀಟಕ್ಕೆ ಮತ್ತೊಂದು ಗರಿ ಬಂದಂತಾಗುತ್ತದೆ.
ಧಾರವಾಡ ತಾಲೂಕಿನ ತಡಸಿನ ಕೊಪ್ಪದ ಬಳಿ 61 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸುಮಾರು 117 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಸಿದ್ಧಗೊಳ್ಳುತ್ತಿದೆ. ನೂತನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಐಐಐಟಿ ಕಟ್ಟಡದಲ್ಲಿ ವಿವಿಧೋದ್ದೇಶ ಸಭಾಂಗಣ, ತರಗತಿ ಕೊಠಡಿಗಳು, ಆಡಳಿತ ಭವನ, ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ಕಟ್ಟಡಗಳನ್ನು ಪರಿಶೀಲನೆ ನಡೆಸಿದರು. ಧಾರವಾಡಕ್ಕೆ ಐಐಐಟಿ ಬರಲು ಅಂದಿನ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿ ಡಾ. ರಜನೀಶ ಗೋಯೆಲ್ ಸಹಕಾರ ನೀಡಿದ್ದರು.
ಓದಿ:ಹೊಸ ಟಚ್ ಪಡೆದುಕೊಳ್ಳಲಿದೆ ಹುಬ್ಬಳ್ಳಿಯ ಕೆಎಸ್ಸಿಎ ಗ್ರೌಂಡ್
ನೂತನ ಕಟ್ಟಡದ ವಿನ್ಯಾಸ ನಿರೀಕ್ಷೆಯಂತೆ ಇರಲಿಲ್ಲ. ಧಾರವಾಡ ಹೆಗ್ಗುರುತಾಗಿ ಗುರುತಿಸಲ್ಪಡುವ ಕರ್ನಾಟಕ ಕಲಾ ಮಹಾವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಮಾದರಿಯಲ್ಲಿ ವಿನ್ಯಾಸಗೊಳಿಸಲು ಸೂಚಿಸಿ ಪುನರ್ ರಚಿಸಲಾಯಿತು. ಐಐಐಟಿ ಸರ್ಕಾರದ ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತವೆ. ವಿದ್ಯಾರ್ಥಿಗಳ ಶುಲ್ಕ, ಸಂಶೋಧನಾ ಚಟುವಟಿಕೆಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಸ್ವಾಯತ್ತಾಗಿ ನಿರ್ವಹಿಸಲ್ಪಡುತ್ತದೆ.