ಹುಬ್ಬಳ್ಳಿ: ಮೆಡಿಕಲ್ ಶಾಪ್ ಸಿಬ್ಬಂದಿ ಯಡವಟ್ಟಿಗೆ ಅಮಾಯಕ ರೋಗಿ ಬಲಿಯಾಗಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹುಬ್ಬಳ್ಳಿಯ ವೆಲ್ನೆಸ್ ಫಾರೆವರ್ ಮೆಡಿಕಲ್ ಶಾಪ್ ಸಿಬ್ಬಂದಿಯ ಎಡವಟ್ಟಿಗೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಅಜ್ಜುಹಳ್ಳಿ ಗ್ರಾಮದ ನಿವಾಸಿ ಹನಮಂತಪ್ಪ ಪಾಟೀಲ (62) ಎಂಬುವರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೃತ ಹನಮಂತಪ್ಪ ಪಾಟೀಲ ಅವರು, ಧಾರವಾಡದ ಮಾನಸಿಕ ತಜ್ಞ ಡಾ. ಪಾಂಡುರಂಗಿ ಬಳಿ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ತಾವು ಪಡೆಯಬೇಕಾದ ಮಾತ್ರೆ ಪಾಂಡುರಂಗಿ ಆಸ್ಪತ್ರೆಯಲ್ಲಿ ಇಲ್ಲದ ಕಾರಣ ವೆಲ್ನೆಸ್ ಫಾರೆವರ್ ಎಂಬ ಮೆಡಿಕಲ್ ಶಾಪ್ನಲ್ಲಿ ಮಾತ್ರೆಯನ್ನು ಖರೀದಿಸಿದ್ದರು ಎನ್ನಲಾಗಿದೆ.
ಮೆಡಿಕಲ್ ಸಿಬ್ಬಂದಿ ಮಾನಸಿಕ ಖಿನ್ನತೆಗೆ ನೀಡುವ ಮಾತ್ರೆಯ ಬದಲಾಗಿ ಕ್ಯಾನ್ಸರ್ ಹಾಗೂ ಆರ್ಥೈಟಿಸ್‌ಗೆ ನೀಡುವ ಮಾತ್ರೆಯನ್ನು ನೀಡಿದ್ದರು. methotrexate ಎಂಬ ಔಷಧಿ ಕೊಟ್ಟ ವೆಲ್ನೆಸ್ ಫಾರೆವರ್ ಸಿಬ್ಬಂದಿ ನೀಡಿದ್ದರು. ದಿನಕ್ಕೆ ಒಂದರಂತೆ ಮಾನಸಿಕ ಖಾಯಿಲೆಯ ಮಾತ್ರೆ ಎಂದು ಕ್ಯಾನ್ಸರ್ ಮಾತ್ರೆ ತೆಗೆದುಕೊಂಡಿದ್ದ ಹನುಮಂತಪ್ಪ, ಬಳಿಕ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ.
ಅಸ್ವಸ್ಥಗೊಂಡ ಹಿನ್ನೆಲೆ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ವಿವೇಕಾನಂದ ಆಸ್ಪತ್ರೆಯಲ್ಲಿ methotrexate ಮಾತ್ರೆಯ ಅಡ್ಡ ಪರಿಣಾಮಗಳು ಪತ್ತೆ ಹಚ್ಚಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಎಸ್‌ಡಿಎಂ ಆಸ್ಪತ್ರೆಗೆ ರವಾನಿಸಿದ್ದರು. ಅಡ್ಡಪರಿಣಾಮ ಹೆಚ್ಚಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಹನಮಂತಪ್ಪ ಮೇ 24ರಂದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಹನಮಂತಪ್ಪನ ಸಾವಿನ ಹಿನ್ನೆಲೆ ಮಗ ಪ್ರವೀಣನ ಮದುವೆಯನ್ನು ಕುಟುಂಬಸ್ಥರು ರದ್ದುಗೊಳಿಸಿದ್ದಾರೆ. ಬಳಿಕ ಹುಬ್ಬಳ್ಳಿ ವೆಲ್ನೆಸ್ ಫಾರೆವರ್ ಮೆಡಿಕಲ್ ಶಾಪ್‌ನವರಿಗೆ ಹನಮಂತಪ್ಪ ಅವರ ಸಂಬಂಧಿಗಳು ತರಾಟೆಗೆ ತೆಗೆದುಕೊಂಡಿದ್ದು, ಗಲಾಟೆ ಆರಂಭವಾಗುತ್ತಿದ್ದಂತೆಯೇ ಮೆಡಿಕಲ್ ಶಾಪ್ ಸಿಬ್ಬಂದಿ ಅಂಗಡಿ ಬಾಗಿಲು ಮುಚ್ಚಿದ್ದಾರೆ. ಪ್ರಕರಣ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.