ಧಾರವಾಡ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗಾಗಿ ತಾಲೂಕಿನ ತಡಸಿನಕೊಪ್ಪ ಮತ್ತು ಹಾರೋಬೆಳವಡಿಯಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
ವರುಣನ ಆರ್ಭಟದಿಂದ ಜನ ಸೂರು ಕಳೆದುಕೊಂಡು ಪರದಾಡುತ್ತಿದ್ದು, ಅವರಿಗೆ ಆಶ್ರಯ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇನ್ನು ಹುಬ್ಬಳ್ಳಿ ತಾಲೂಕಿನ ಕಿರೇಸೂರ, ಹೆಬಸೂರ ಹಾಗೂ ಭಂಡಿವಾಡ ಗ್ರಾಮಗಳಲ್ಲಿಯೂ ಪರಿಹಾರ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.
ಮಳೆ ಆವಾಂತರದಿಂದ ಕೃಷಿ ವಿವಿ ಬಳಿಯ KPTCL ವಿದ್ಯುತ್ ಗ್ರಿಡ್ ಕೇಂದ್ರದಲ್ಲಿ ನುಗ್ಗಿದ್ದ ನೀರಿನಲ್ಲಿ ಸಿಲುಕಿದ್ದ ನಾಲ್ವರು ಸಿಬ್ಬಂದಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಬೆಳಗಿನ ಜಾವ 4 ಗಂಟೆಗೆ ರಕ್ಷಿಸಿದ್ದಾರೆ. ಇನ್ನು ಉಪ್ಪಿನಬೆಟಗೇರಿಯಲ್ಲಿ ಸ್ಥಳೀಯರ ನೆರವಿನಿಂದ ಏಳು ಜನರನ್ನು ರಕ್ಷಿಸಲಾಗಿದ್ದು, ಮಳೆಹಾನಿಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಣಕ್ಕೆ ಈಗಾಗಲೇ ಜಿಲ್ಲೆಗೆ 24 ಮಂದಿಯನ್ನೊಳಗೊಂಡ NDRF ತಂಡ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಬೆಳಗಾವಿ ಮಾರ್ಗದ ರೈಲು ನಿಲುಗಡೆಯಾದ್ದರಿಂದ 15 ಬಸ್ಗಳು ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೆಳಗಾವಿಗೆ ಕಳುಹಿಸಲಾಗಿದೆ. ಹಳ್ಳದ ನೀರಿನ ಒತ್ತಡಕ್ಕೆ ತಾಲೂಕಿನ ಯಾದವಾಡ ಗ್ರಾಮದ ಸೇತುವೆ ಕೊಚ್ಚಿ ಹೋಗಿದ್ದು, ಇದು ತುಪ್ಪರಿಹಳ್ಳ ಸೇರುವ ದೊಡ್ಡ ಹಳ್ಳವಾಗಿದೆ. ಹಾಗೇ ಹಾರೋಬೆಳವಡಿ ಹತ್ತಿರ ಸಹ ರಸ್ತೆಯಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎನ್ನಲಾಗಿದೆ. ಈ ಸಂಬಂಧ ಪರಿಹಾರ ಕ್ರಮಗಳನ್ನು ಭರದಿಂದ ನಡೆಸಲು ಮೇಲಿಂದ ಮೇಲೆ ಜಿಲ್ಲಾಧಿಕಾರಿ ದೀಪಾ ಚೋಳನ್ ಸಭೆ ನಡೆಸುತ್ತಿದ್ದಾರೆ.