ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಬಂಡಾಯದ ನಾಡು ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ವಿನೋದ್ ಅಸೋಟಿ ನಡುವೆ ತೀವ್ರ ಪೈಪೋಟಿ ಇದೆ. ಯುವನಾಯಕ ವಿನೋದ್ ಅಸೋಟಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕೆಂದು ಕಾರ್ಯಕರ್ತರು ಕೈಯಲ್ಲಿ ಕರ್ಪೂರ ಹಚ್ಚಿ ದೇವರಿಗೆ ಮೊರೆ ಹೋಗಿದ್ದಾರೆ.
ಯುವ ನಾಯಕ ವಿನೋದ ಅಸೋಟಿ ಅಭಿಮಾನಿಗಳು ದೇವರಿಗೆ ಕೈಯಲ್ಲಿ ಕರ್ಪೂರ ಹಚ್ಚಿ ಬೇಡಿಕೊಂಡಿದ್ದು, ಇದೇ ವೇಳೆ ಕಾರ್ಯಕರ್ತರು ಜೈಕಾರ ಹಾಕಿದರು. ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.
ಕರ್ಪೂರ ಹಚ್ಚಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು ವಿನೋದ್ ಅಸೋಟಿಗೆ ಟಿಕೆಟ್ ನೀಡಿದ್ರೆ ಮಾತ್ರ ಕಾಂಗ್ರೆಸ್ ಸುಲಭ ಗೆಲುವು ಸಾಧ್ಯವಿದೆ. ಕ್ಷೇತ್ರದಲ್ಲಿ ಒಳ್ಳೆಯ ಹೆಸರು ವರ್ಚಸ್ಸು ಬೆಳೆಸಿಕೊಂಡಿರುವ ಹಾಗೂ ಜನಪರ ಅಪಾರ ಕಾಳಜಿ ಇರುವ ಯುವ ನಾಯಕ ಅಸೋಟಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ನವಲಗುಂದ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ, ಕೆ.ಎನ್.ಗಡ್ಡಿ, ವಿನೋದ ಅಸೋಟಿ ಟಿಕೆಟ್ ರೇಸ್‌ನಲ್ಲಿದ್ದಾರೆ. ಕೊನರೆಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಯುವನಾಯಕನ ಅಗತ್ಯವಿದೆ. ವಿನೋದ ಅಸೋಟಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕೆಂದು ಅಭಿಮಾನಿಗಳು ದೇವರಿಗೆ ಮೊರೆ ಹೋಗಿದ್ದಾರೆ.
ಬಂಡಾಯದ ಬಿಸಿ: ಗ್ರಾಮೀಣ ಕ್ಷೇತ್ರದ ಟಿಕೆಟ್ ಉಳಿಸಿಕೊಳ್ಳಲ್ಲಿ ವಿನಯ್ ಕುಲಕರ್ಣಿ ಅವರಿಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇದೆ. ಈ ಕ್ಷೇತ್ರದಿಂದ ಇಸ್ಮಾಯಿಲ್ ತಮಟಗಾರ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಿಲ್ಲೆಯಲ್ಲಿ ಒಬ್ಬರಿಗಾದರೂ, ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಇಸ್ಮಾಯಿಲ್ ತಮಟಗಾರ ಒತ್ತಾಯಿಸಿದ್ದರು. ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಧಾರವಾಡಕ್ಕೆ ಬಂದ ಮೇಲೆ ತಮ್ಮ ಮುಂದಿನ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
ಕಲಘಟಗಿ ಕ್ಷೇತ್ರ: ಜಿಲ್ಲೆಯ ಮತ್ತೊಂದು ಕ್ಷೇತ್ರ ಕಲಘಟಗಿಗೂ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಮಾಜಿ ಸಚಿವ ಸಂತೋಷ ಲಾಡ್ ಅವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲಿ ಕೂಡ ನಾಗರಾಜ ಛೆಬ್ಬಿ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಕೊನೆಗೆ ಲಾಡ್ ಅವರಿಗೆ ಕ್ಷೇತ್ರದ ಟಿಕೆಟ್ ಕೊಡಲಾಗಿದೆ. ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಗರಾಜ ಛೆಬ್ಬಿ ಸ್ಪರ್ಧಿಸಲಿದ್ದಾರೆ ಎನ್ನುವುದನ್ನೂ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಚೆಕ್‌ಪೋಸ್ಟ್ ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್ ಬ್ಯಾರಿಕೇಡ್‌ಗೆ ಲಾರಿ ಗುದ್ದಿಕೊಂಡು ಹೋಗಿರುವ ಘಟನೆ ಧಾರವಾಡ ನವಲಗುಂದ ರಸ್ತೆಯಲ್ಲಿ ನಡೆದಿದೆ. ಧಾರವಾಡದಿಂದ ನವಲಗುಂದ ಕಡೆಗೆ ಹೊರಟಿದ್ದ ಲಾರಿ ವೇಗವಾಗಿ ಬಂದು ಬ್ಯಾರಿಕೇಡ್‌ಗೆ ಗುದ್ದಿದೆ. ಸಿಬ್ಬಂದಿ ಸ್ಥಳದಲ್ಲೇ ಚುನಾವಣಾ ಕರ್ತವ್ಯದಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂಓದಿ:ಸಿದ್ದರಾಮಯ್ಯ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ಪರೇಡ್, ಟಿಕೆಟ್ಗಾಗಿ ಲಾಬಿ