ಧಾರವಾಡ: 26ನೇ ರಾಷ್ಟ್ರೀಯ ಯುವಜನೋತ್ಸವ ಮೇಳದಲ್ಲಿ ಇಂದು ಕ್ಲೇ ಮಾಡೆಲಿಂಗ್ ಮತ್ತು ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಯುವ ಕಲಾವಿದರು ಮಣ್ಣಿಂದ ಮಾಡಿದ ಅದ್ಭುತ ಕಲಾಕೃತಿಗಳು ಕಣ್ಮನ ಸೆಳೆದವು. ಯುವ ಕಲಾವಿದರ ಕಲ್ಪನೆಯಲ್ಲಿ ಮೇಕ್ ಇನ್ ಇಂಡಿಯಾ, ಭವಿಷ್ಯದ ಭಾರತ, ಭಾರತ 2047 ಕುರಿತ ಪರಿಕಲ್ಪನೆ ಆಧಾರಿತ ಕಲಾಕೃತಿಗಳು ಯುವ ಕಲಾವಿದರ ಪ್ರತಿಭೆಯನ್ನು ಅನಾವರಣ ಗೊಳಿಸಿದವು.
ಕ್ಲೇ ಮಾಡೆಲಿಂಗ್ನಲ್ಲಿ ಮೂಡಿಬಂದ ಯುವ ಕಲಾವಿದರ ಕಲಾಕೃತಿಗಳು: ಮೂರು ದಿನ ಮೂರು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ದಿನ ಫ್ರಿ ಹ್ಯಾಂಡ್ ಹಾಗೂ ಒಂದು ದಿನ ಪರಿಕಲ್ಪನೆ ಆಧಾರಿತವಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೆಟ್ರೋ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದ ಮುಂದುವರಿಕೆ, ವಿಶ್ವಗುರು ಭಾರತ, ಗ್ರೀನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಮುಂತಾದ ಪರಿಕಲ್ಪನೆಗಳು ಚಿತ್ರಕಲೆಯ ಮೂಲಕ ಅನಾವರಣಗೊಂಡವು. ಮೇಕ್ ಇನ್ ಇಂಡಿಯಾ ಲಾಂಛನವಾದ ಸಿಂಹ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ಕ್ರೀಡೆ, ಭಾರತದ ಭೂಪಟ, ಬುದ್ಧ, ನರೇಂದ್ರ ಮೋದಿ ಅವರ ಮುಖ ಸೇರಿದಂತೆ ಅನೇಕ ಕಲಾಕೃತಿಗಳನ್ನು ಯುವ ಕಲಾವಿದರು ಕ್ಲೇ ಮಾಡೆಲಿಂಗ್ನಲ್ಲಿ ಪ್ರದರ್ಶಿಸಿದರು.
ಈ ಕಲಾವಿದರು ತಮ್ಮ ಮನದಾಳದಲ್ಲಿ ಮೂಡುವ ಕಲ್ಪನೆಗಳಿಗೆ ಜೀವತುಂಬುವ ಕಾರ್ಯದಲ್ಲಿ ಉತ್ಸುಕತೆಯಿಂದ ಮಗ್ನರಾಗಿರುವುದು ನೋಡುವವರಲ್ಲಿಯೂ ಸಹ ಉತ್ಸಾಹ ತುಂಬುವಂತಿತ್ತು. ವಿಶಾಲವಾದ ಹಸಿರು ಹುಲ್ಲಿನ ಹಾಸಿಗೆಯ ಮೇಲೆ ನಿಂತ ಕಲಾವಿದರಿಂದ ಮೂಡಿಬಂದ ಮಣ್ಣಿನ ಕಲಾಕೃತಿಗಳು ನೋಡುಗರನ್ನು ತಮ್ಮತ್ತ ಕೈ ಮಾಡಿ ಕರೆಯುತ್ತಿವೆಯೇ ಎಂಬಂತೆ ಭಾಸವಾದ ಅನುಭವ ನೀಡಿದವು.
ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಯುವ ಕಲಾವಿದರು: ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಯುವ ಕಲಾವಿದರು ಸ್ಪರ್ಧೆಗಳಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿದರು. ಕ್ಲೇ ಮಾಡೆಲಿಂಗ್ ಸ್ಪರ್ಧೆಗೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ನೀಡಲಾಗಿದ್ದು, ಕಲಾವಿದರಿಗೆ ಮೂರು ದಿನಗಳ ಕಾಲ ಸಮಯಾವಕಾಶ ನೀಡಲಾಗಿತ್ತು. ಇನ್ನು ಛಾಯಾಚಿತ್ರಗಾರರಿಗೆ ಪೂರ್ತಿ ಯುವಜನೋತ್ಸವದ ಕಾರ್ಯಕ್ರಮಗಳನ್ನೇ ವಿಷಯವಾಗಿ ನೀಡಲಾಗಿತ್ತು. ಎಲ್ಲ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ರಾಷ್ಟ್ರೀಯ ಯುವಜನೋತ್ಸವ: ಜಲಕ್ರೀಡೆಯಲ್ಲಿ ಭಾಗವಹಿಸಿ ಸಂತಸಪಟ್ಟ ಯುವ ಜನರು..
ಸ್ಥಳೀಯ ಕಲಾವಿದರಿಗೂ ಅವಕಾಶ: ಯುವ ಕಲಾವಿದರ ಶಿಬಿರ ಕೇವಲ ಯುವಜನೋತ್ಸವದ ಸ್ಪರ್ಧಾಳುಗಳಿಗೆ ಮಾತ್ರವಲ್ಲದೇ ಇದೇ ಮೊದಲ ಬಾರಿಗೆ ಸ್ಥಳೀಯ ಕಲಾವಿದರಿಗೂ ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಿದ್ದು ವಿಶೇಷ. ಅನ್ಯ ರಾಜ್ಯಗಳ 108 ಕಲಾವಿದರು ಹಾಗೂ ಸ್ಥಳೀಯ 130ಕ್ಕೂ ಅಧಿಕ ಕಲಾವಿದರು ಚಿತ್ರಕಲೆ, ಮಣ್ಣಿನ ಕಲಾಕೃತಿ ಹಾಗೂ ಫೊಟೊಗ್ರಾಫಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಇಂದು ಯುವ ಕಲಾವಿದರ ಶಿಬಿರಕ್ಕೆ ಭೇಟಿ ನೀಟಿ ತಮ್ಮ ಹಸ್ತಾಕ್ಷರವನ್ನು ದಾಖಲಿಸಿದರು.
ಇದನ್ನೂ ಓದಿ:ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ: ಗಮನ ಸೆಳೆದ ಗಂಡು ಕಲೆಗಳ ಪ್ರದರ್ಶನ