ಹುಬ್ಬಳ್ಳಿ: ಕಲಘಟಗಿ ಟಿಕೆಟ್ ಕೊನೆಗೂ ನಾಗರಾಜ್ ಛಬ್ಬಿ ಪಾಲಾಗಿದೆ. ಇದರಿಂದ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಅಸಮಾಧಾನಗೊಂಡಿದ್ದಾರೆ. ನಿಂಬಣ್ಣವರ ಮನೆಗೆ ನಾಗರಾಜ್ ಛಬ್ಬಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಛಬ್ಬಿ ಅವರು ನಿಂಬಣ್ಣವರ್ ಕಾಲು ಮುಟ್ಟಿ ನಮಸ್ಕರಿಸಿ ಮನವೊಲಿಕೆ ಮಾತುಕತೆ ನಡೆಸಿದರು.
ನಿಂಬಣ್ಣವರ ನೇತೃತ್ವದಲ್ಲಿ ಚುನಾವಣೆ: ನಿಂಬಣ್ಣನವರಿಗೆ ಸ್ವಲ್ಪ ನೋವಿದೆ. ಎರಡು ಮೂರು ದಿನದಲ್ಲಿ ಅವರ ನೇತೃತ್ವದಲ್ಲಿಯೇ ಚುನಾವಣೆ ಮಾಡ್ತೀವಿ. ಅವರು ಸಪೋರ್ಟ್ ಮಾಡ್ತಾರೆ, ಸ್ವಲ್ಪ ನೋವಿತ್ತು ಹೇಳಿಕೊಂಡಿದ್ದಾರೆ. ಅದೆಲ್ಲ ಸರಿ ಹೋಗುತ್ತೆ. ಕಾಂಗ್ರೆಸ್‌ನಲ್ಲಿದ್ದೆ, ಬಿಜೆಪಿ ಹೊಸ ಮನೆ. ಯಾವುದೂ ಸರಿ, ತಪ್ಪು ನೋಡಿಕೊಂಡು ಹೋಗ್ತೀನಿ. ಬಿಜೆಪಿಯಲ್ಲಿರೋ ಉತ್ಸಾಹ ಕಾಂಗ್ರೆಸ್ನಲ್ಲಿ ನಾನು ನೋಡಿಲ್ಲ ಎಂದು ಹೇಳಿದರು.
ಬಳಿಕ ಮಾತನಾಡಿದ ಟಿಕೆಟ್ ವಂಚಿತ ಶಾಸಕ ಸಿ.ಎಮ್.ನಿಂಬಣ್ಣನವರ್, ನಾಗರಾಜ ಛಬ್ಬಿ ನನ್ನ ಮನೆಗೆ ಬಂದಿದ್ದರು. ಅತಿಥಿಗಳು ಮನೆಗೆ ಬಂದಾಗ ಸತ್ಕಾರ ಮಾಡುವ ನಮ್ಮ ಧರ್ಮ ಮಾಡಿದ್ದೇನೆ. ಅವರು ಚುನಾವಣೆ ಸ್ಪರ್ಧಿಸಲು ಪಕ್ಷದ ಟಿಕೆಟ್ ತಂದಿದ್ದಾರೆ. ಅವರಿಗೆ ಒಳಿತಾಗಲಿ. ನಾಗರಾಜ ಛಬ್ಬಿಗೆ ಅಡ್ಡಿಪಡಿಸುವುದಿಲ್ಲ. ಅವರ ವಿರುದ್ಧ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ನನ್ನ ಹೋರಾಟ ಸ್ಥಳೀಯ ಬಿಜೆಪಿ ಅಭ್ಯರ್ಥಿ ವಿರುದ್ಧ ಇಲ್ಲ. ನನ್ನದೇನಿದ್ದರೂ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಎಂದರು.
ವರಿಷ್ಠರು ನನ್ನನ್ನು ಕೇಳಬೇಕಿತ್ತು: ಪಕ್ಷ ನಮ್ಮನ್ನು ಊಟದ ಎಲೆ ಮಾಡಿದಂತೆ ಮಾಡಿದೆ. ಊಟ ಮಾಡಿ ಎಲೆ ಬಿಸಾಕೋ ಹಾಗೇ ನಮ್ಮನ್ನು ಇದೀಗ ಬೀಸಾಕಿದ್ದಾರೆ ಎಂದು ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಬೇಸರ ವ್ಯಕ್ತಪಡಿಸಿದ್ದಾರೆ. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ನಾಗರಾಜ್ ಛಬ್ಬಿ ಅವರಿಗೆ ನೀಡಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ನಿಂಬಣ್ಣವರ, ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನಾನೊಬ್ಬ ಶಾಸಕನಾಗಿ ಜೀವಂತ ಇದೀನೋ, ಇಲ್ಲವೋ ಎನ್ನುವುದನ್ನೂ ಕೇಳದೇ ಬಿಜೆಪಿ ಪಕ್ಷವನ್ನೂ ಬೈದವರಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ.
ರಾಜ್ಯದ ನಾಯಕರು, ರಾಷ್ಟ್ರೀಯ ನಾಯಕರು ಯಾರೂ ಕೂಡಾ ಟಿಕೆಟ್ ವಿಚಾರವನ್ನು ನನಗೆ ಕೇಳಲೇ ಇಲ್ಲ. ಈ ಹಿಂದೆ ನಾಗರಾಜ್ ಛಬ್ಬಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೂ ನನಗೆ ತಿಳಿಸಿಲ್ಲ. ಯಾರೊಬ್ಬರನ್ನು ಕೇಳದೇ ಛಬ್ಬಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂಓದಿ:ಬಿಜೆಪಿಗೆ ಗುಡ್ ಬೈ ಹೇಳಿದ ಮತ್ತೋರ್ವ ಬೆಳಗಾವಿಯ ಮಾಜಿ ಸಚಿವ