ಹುಬ್ಬಳ್ಳಿ: ಕಾಡಾನೆ ಮರಿಯೊಂದು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಕಲಘಟಗಿ ತಾಲೂಕಿನ ಅರಣ್ಯಕ್ಕೆ ಹೊಂದಿಕೊಂಡಿರುವ ಕಂದ್ಲಿ ಗ್ರಾಮದ ಬಳಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ತಾಲೂಕಿನ ಸೂಳಿಕಟ್ಟಿ, ಮಸಳಿಕಟ್ಟಿ, ಸಂಗಮೇಶ್ವರ ಗ್ರಾಮಗಳ ಸುತ್ತಮುತ್ತ ಆನೆಗಳ ದಂಡು ಕಾಣಿಸಿಕೊಂಡಿತ್ತು. ಕಾಡಿನಿಂದ ನಾಡಿನತ್ತ ಬಂದಿರುವ ಈ ಮೂರು ಕಾಡಾನೆಗಳ ಗುಂಪಿನಲ್ಲಿ ಇದ್ದ ಆನೆಮರಿ ನಿಗೂಢವಾಗಿ ಸಾವನ್ನಪ್ಪಿದೆ.
ಮೃತ ಆನೆಮರಿ ಸುಮಾರು ಒಂದೂವರೆ ವರ್ಷದ್ದಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವೈದ್ಯರು ಮರಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಕಾಡಾನೆ ಮರಿ ಸಾವು ಅರಣ್ಯ ಇಲಾಖೆ ಹಾಗೂ ಸುತ್ತಲಿನ ಜನರಲ್ಲಿ ಆಶ್ಚರ್ಯ ಹಾಗೂ ಆತಂಕ ಉಂಟು ಮಾಡಿದೆ.
ಇದನ್ನೂ ಓದಿ: ಬೀಳು ಬಿದ್ದ ಜಮೀನಿನಲ್ಲಿ ಹುಲಿ ಹಾಗೂ ಹುಲಿ ಮರಿ ಕಳೇಬರ ಪತ್ತೆ
ಕೊಳೆತ ಸ್ಥಿತಿಯಲ್ಲಿ ಆನೆ ಪತ್ತೆ( ಚಾಮರಾಜನರ): ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ನಾಗಣಾಪುರದ 2ನೇ ಬ್ಲಾಕ್ನಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಗಂಡು ಕಾಡಾನೆ ಪತ್ತೆಯಾಗಿತ್ತು. ಹುಣಸೆತಾಳ ಕಂಡಿ ಅರಣ್ಯ ಪ್ರದೇಶದಲ್ಲಿ ಆನೆ ಮೃತದೇಹ ಕಂಡಿದ್ದು, ಆನೆಗೆ ಸುಮಾರು 40 ರಿಂದ 45 ವರ್ಷ ವಯಸ್ಸಾಗಿದ್ದು, ಮೃತಪಟ್ಟಿರುವ ಆನೆಯ 2 ದಂತವನ್ನು ಬೇರ್ಪಡಿಸಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಈ ಆನೆ ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ದೃಢಪಡಿಸಿದ್ದರು.
ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಸಾವು:- ಹಾಸನ : ಕಾಡಾನೆ ದಾಳಿಗೆ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಬಲಿಯಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆದಿತ್ತು. ಅರ್ಜುನ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ವೇಳೆ ಘಟನೆ ಸಂಭವಿಸಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಆ ಆನೆ ಅರ್ಜುನನ ಮೇಲೆ ದಾಳಿ ನಡೆಸಿತ್ತು. ಒಂಟಿ ಸಲಗದ ಜೊತೆ ಕಾಳಗಕ್ಕಿಳಿದ ಅರ್ಜುನ ಹೋರಾಟ ನಡೆಸುತ್ತಿದ್ದಂತೆ, ಅರ್ಜುನನ ಮೇಲಿನಿಂದ ಮಾವುತರು ಕೆಳಗಿಳಿದಿದ್ದರು. ಬಳಿಕ ಕಾಳಗದಲ್ಲಿ ಹೋರಾಡುವಾಗ ಹೊಟ್ಟೆ ಭಾಗಕ್ಕೆ ಒಂಟಿ ಸಲಗ ತಿವಿದಿದ್ದರಿಂದಾಗಿ ಅರ್ಜುನ ಮೃತಪಟ್ಟಿದ್ದ. ಈ ವಿಚಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.