ಹುಬ್ಬಳ್ಳಿ: ಪಂಚರಾಜ್ಯ ಚುನಾವಣೆ ಮೇಲೆ ನನ್ನ ಪಕ್ಷಾಂತರದ ಎಫೆಕ್ಟ್ ಆಗಿದೆ ಎಂದು ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಹಿಂದಿನಿಂದ ಇದೆ. ಬಿಜೆಪಿ ವರಿಷ್ಠರಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಆಸೆ, ಆದರೆ ಕರ್ನಾಟಕದಲ್ಲಿ ಅದು ಅಧಿಕಾರ ಕಳೆದುಕೊಂಡಿತು. ಹೀಗಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಹಿರಿಯ ಮುಖಂಡರಿಗೆ ಮಣೆ ಹಾಕಿದೆ ಎಂದಿದ್ದಾರೆ.
ಅಲ್ಲಿ 80 ವರ್ಷ ವಯಸ್ಸು ದಾಟಿದ ಹಿರಿಯರಿಗೂ ಟಿಕೆಟ್ ಕೊಟ್ಟಿದ್ದಾರೆ. ಈ ನಿಯಮ ಎಲ್ಲರಿಗೂ ಒಂದೇ ಅನ್ವಯವಾಗಬೇಕಲ್ಲವೇ? ಎಂದು ಪ್ರಶ್ನಿಸಿದ ಶೆಟ್ಟರ್, ನನಗೆ ಟಿಕೆಟ್ ತಪ್ಪಿಸಲು ಏನು ಕಾರಣ ಎಂದು ಇದುವರೆಗೆ ಹೇಳಿಲ್ಲ, ಇದರ ಪರಿಣಾಮ ಏನಾಯಿತೆಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಯಾರೋ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಹೀಗಾಗಿ ವಿಜಯೇಂದ್ರ ಅವರನ್ನು ನಿಯುಕ್ತಿಗೊಳಿಸಿದ್ದಾರೆ. ಆಪರೇಷನ್ ಕಮಲ ಪ್ರಕ್ರಿಯೆ ಶುರು ಇದೆ, ಈ ರೀತಿ ಮಾಡಿದರೆ ಕೈ ಶಾಸಕರು ತಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವ ಭ್ರಮೆಯಲ್ಲಿ ಅವರಿದ್ದಾರೆ. ಆದರೆ ಆಪರೇಷನ್ ಕಮಲ ಪ್ರಯತ್ನ ಸಫಲವಾಗುವುದಿಲ್ಲ ಎಂದು ಶೆಟ್ಟರ್ ಹೇಳಿದರು.
ಇನ್ಸ್ಪೆಕ್ಟರ್ಗೆ ತರಾಟೆ ಪ್ರಕರಣ, ಜೋಶಿ ವಿರುದ್ಧ ಶೆಟ್ಟರ್ ಕಿಡಿ: ದೀಪಾವಳಿ ಹಬ್ಬದ ದಿನ ಧಾರವಾಡದ ಶಹರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ನಿವಾಸದಲ್ಲಿ ತರಾಟೆ ತೆಗೆದುಕೊಂಡಿದ್ದನ್ನು ಜಗದೀಶ್ ಶೆಟ್ಟರ್ ಖಂಡಿಸಿದ್ದಾರೆ. ಸಾರ್ವಜನಿಕರ ಮುಂದೆ ಒಬ್ಬ ಅಧಿಕಾರಿಗೆ ಬೈಯುವುದು ಸರಿಯಲ್ಲ. ತಮ್ಮ ಸ್ಥಾನಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿದ್ದಾರೆ.
ಜೋಶಿ ಅವರು ಕೇಂದ್ರ ಮಂತ್ರಿಗಳು, ಅಧಿಕಾರಿಗಳು ತಪ್ಪು ಮಾಡಿದ್ರೆ ಕೂರಿಸಿ ತಿಳಿಹೇಳಬೇಕೆ ಹೊರತು, ಎಲ್ಲರ ಮುಂದೆ ಬೈಯುವುದಲ್ಲ. ಒಬ್ಬ ರೌಡಿ ಶೀಟರ್‌ಗೆ ಜೋಶಿ ಅವರು ಬೆಂಬಲ ನಿಡ್ತಿದ್ದಾರೆ. ಇದರಿಂದ ಪೊಲೀಸ್ ವ್ಯವಸ್ಥೆ ಮೇಲೆ ಬಹಳ ಪರಿಣಾಮ ಬೀರುತ್ತೆ. ಪೊಲೀಸ್ ವ್ಯವಸ್ಥೆ ಕೆಟ್ಟರೆ ಸಮಾಜ ಉಳಿಸುವವರು ಯಾರು? ಕೇಂದ್ರ ಸಚಿವರು ಮಾಡಿದ್ದು ಸರಿಯಲ್ಲ ಎಂದರು.
ಇದನ್ನೂಓದಿ:ಯಾರೋ ಮಾಡಿದ ಅಚಾತುರ್ಯವನ್ನು ನಾನೇ ಒಪ್ಪಿಕೊಂಡೆ: ಹೆಚ್.ಡಿ.ಕುಮಾರಸ್ವಾಮಿ