ಹುಬ್ಬಳ್ಳಿ : ಜಗತ್ತಿನಾದ್ಯಂತ ಕೊರೊನಾ ವೈರಸ್ ತನ್ನ ಭೀತಿ ಸೃಷ್ಟಿಸಿರುವ ಪರಿಣಾಮ ಅದೆಷ್ಟೋ ಜನ ಉದ್ಯೋಗ ಕಳೆದುಕೊಂಡು ತುತ್ತು ಅನ್ನಕ್ಕಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಕಂಡ ಮುಸ್ಲಿಂ ಸಂಘಟನೆಯೊಂದು ನಿರಂತರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣದ ಪಕ್ಕದ ಚಿಕ್ಕ ಮೈದಾನದಲ್ಲಿ ಕರ್ನಾಟಕ ವೆಲ್ಫೇರ್ ಪೀಸ್ ಕೌನ್ಸಿಲ್ ಮುಸ್ಲಿಂ ಸಂಸ್ಥೆ ಟೆಂಟ್ ಹಾಕಿ ಕೊಂಡಿದೆ. 'ಹಸಿವಿಗೆ ಯಾವುದೇ ಧರ್ಮ-ಜಾತಿ ಇಲ್ಲ' ಎಂಬ ಧ್ಯೇಯ ಇಟ್ಟುಕೊಂಡು ಕಳೆದ 15 ದಿನಗಳಿಂದ ನಿರಂತರವಾಗಿ ಹಸಿದ ಬಡವರಿಗೆ, ಅನಾಥರಿಗೆ, ಕಾರ್ಮಿಕರ ಹಸಿವು ನೀಗಿಸುವ ಮಹತ್ವದ ಕಾರ್ಯ ಮಾಡುತ್ತಿದೆ.
ಈ ಸಂಸ್ಥೆ ಅನೇಕ ಸದಸ್ಯರನ್ನು ಒಳಗೊಂಡಿದೆ. ಲಾಕ್ಡೌನ್ ಸಂದರ್ಭದಲ್ಲಿ ಸಹ ಹಲವು ನಿರ್ಗತಿಕರಿಗೆ, ಹಸಿದವರಿಗೆ ಆಹಾರ ನೀಡಿದೆ. ತನ್ನ ಸಾಮಾಜಿಕ ಕಾರ್ಯದ ಮೂಲಕ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದಿನಕ್ಕೆ ನೂರಾರು ಜನರು ಉದ್ಯೋಗಕ್ಕಾಗಿ ಹಳ್ಳಿಯಿಂದ ಹುಬ್ಬಳ್ಳಿಗೆ ಆಗಮಿಸಿ, ಕೆಲಸ ಸಿಗದೆ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಾರೆ. ಅಂತವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತದೆ. ಇವರ ಮಹತ್ವದ ಕಾರ್ಯಕ್ಕೆ ರೈಲ್ವೆ ಜನರಲ್ ಮ್ಯಾನೇಜರ್ ಸಹ ಕೈ ಜೋಡಿಸಿರುವುದು ವಿಶೇಷವಾಗಿದೆ.