ಹುಬ್ಬಳ್ಳಿ : ಕಡಲೆ ಬೀಜ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖ ವಾಣಿಜ್ಯ ಹಿಂಗಾರು ಬೆಳೆಯಾಗಿದೆ. ರೈತಾಪಿ ವರ್ಗ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದು, ಕಡಲೆ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಗುತ್ತಿದೆ. ಆದರೆ, ಸರ್ಕಾರ ವಿತರಿಸುವ ಕಡಲೆ ಬೀಜದ ದರ ದುಬಾರಿಯಾಗಿದ್ದು, ಅನ್ನದಾತರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
ಮಳೆ ಅಭಾವದಿಂದ ಮುಂಗಾರು ಬೆಳೆ ಕೈ ಕೊಟ್ಟಿತ್ತು. ಈಗ ಹಿಂಗಾರು ಬೆಳೆಯಾದ ಕಡಲೆಯನ್ನು ಸಣ್ಣ ಹಾಗೂ ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 2.3 ಲಕ್ಷ ಹೆಕ್ಟೇರ್ ಪ್ರದೇಶ ಕಡಲೆ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಅಲ್ಪಸ್ವಲ್ಪ ಮಳೆ ಆಗಮನದಿಂದ ಮುಂಜಾಗ್ರತೆ ಕ್ರಮವಾಗಿ ರೈತರು ಬಿತ್ತನೆಗಾಗಿ ಕಡಲೆ ಖರೀದಿಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರ ಹಾಗೂ 12 ಹೆಚ್ಚುವರಿ ಮಾರಾಟ ಕೇಂದ್ರಗಳು ಸೇರಿ 26 ಕೇಂದ್ರಗಳಲ್ಲಿ ಸಬ್ಸಿಡಿಯಲ್ಲಿ ಬೀಜ ವಿತರಿಸಲಾಗುತ್ತಿದೆ. ರೈತರಿಗೆ ಕೊರತೆಯಾಗದಂತೆ ಕ್ರಮವಹಿಸಿದ್ದು, ಬೀಜ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದಿಂದ ವಿತರಿಸುವ ಬಿತ್ತನೆ ಬೀಜದ ದರ ಕಳೆದ ವರ್ಷ ಕೆ.ಜಿಗೆ 70 ರೂ.ಗೆ ಇತ್ತು. ಪ್ರತಿ ಕ್ವಿಂಟಲ್‌ಗೆ ಕಡಲೆ ಬೀಜ 7 ಸಾವಿರ ರೂ. ಇದ್ದು, ಸಬ್ಸಿಡಿಯಾಗಿ 5 ಸಾವಿರ ರೂ. ಗೆ ದೊರೆತಿತ್ತು. ಈ ಬಾರಿ ಪ್ರತಿ ಕೆ.ಜಿಗೆ 85 ರೂ. ನಿಗದಿಪಡಿಸಲಾಗಿದೆ. ಕ್ವಿಂಟಲ್ ಬಿತ್ತನೆ ಕಡಲೆ ಬೀಜದ ದರ 8,500 ರೂ. ಆಗುತ್ತದೆ. 2,500 ರೂ. ಸಬ್ಸಿಡಿಯಾಗಿ 6,000 ರೂ. ಕ್ವಿಂಟಲ್ ಬೀಜ ನೀಡಲಾಗುತ್ತಿದೆ.
ಕಳೆದ ವರ್ಷ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ 20 ಕೆ.ಜಿ ಪಾಕೇಟ್‌ಗೆ 900 ರೂ. ನೀಡಿ ಖರೀದಿಸಲಾಗಿತ್ತು. ಈ ಬಾರಿ 1,200 ರೂ. ಸರ್ಕಾರ ದರ ನಿಗದಿಪಡಿಸಿದೆ. 300 ರೂ. ಹೆಚ್ಚಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ರೈತ ಮುಖಂಡ ಗುರುರಾಯನಗೌಡರ ಅಸಮಾಧಾನ ವ್ಯಕ್ತಪಡಿಸಿದರು.
ದರ ಕಡಿತಗೊಳಿಸಲು ರೈತರ ಒತ್ತಾಯ: ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ಮುಂಗಾರು ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಈಗ ಮಳೆಯಾದರೆ ಹಿಂಗಾರು ಬೆಳೆ ತೆಗೆಯಬಹುದು ಎಂಬ ಭರವಸೆಯಲ್ಲಿದ್ದು, ಬಿತ್ತನೆ ತಯಾರಿ ನಡೆಸಿದ್ದಾರೆ. ಆದರೆ ಸರ್ಕಾರ ಬೀಜದ ದರ ಹೆಚ್ಚಿಸಿದ್ದು, ರೈತರನ್ನು ಇದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಸರ್ಕಾರ ತಕ್ಷಣ ಕಡಲೆ ಬಿತ್ತನೆ ಬೀಜದ ದರ ಕಡಿಮೆಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಗುರುರಾಯನ ಗೌಡ ಎಚ್ಚರಿಕೆ ನೀಡಿದರು.
ಆದರೆ, ಬೆಲೆ ಏರಿಕೆಯನ್ನು ಧಾರವಾಡ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಕಿರಣ ಕುಮಾರ್ ಎಂ ಸಮರ್ಥಿಸಿಕೊಂಡಿದ್ದಾರೆ. ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಅವರು, ಮಾರುಕಟ್ಟೆಯಲ್ಲಿ ಕಡಲೆ ದರ ಹೆಚ್ಚಾಗಿದ್ದರಿಂದ ಬಿತ್ತನೆ ಬೀಜದ ಬೆಲೆಯೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಕಡಲೆ ಬೀಜ ಖರೀದಿಸಿ, ಪರಿಷ್ಕರಿಸುವ ಮೂಲಕ ಬಿತ್ತನೆಗೆ ಸೂಕ್ತವೋ ಇಲ್ಲ ಎಂಬ ಪರೀಕ್ಷೆ ನಡೆಸಿ ತಯಾರಿಸಲಾಗುತ್ತದೆ.
ಆದ್ದರಿಂದ ಮಾರುಕಟ್ಟೆಗಿಂತ ರೈತ ಸಂಕರ್ಪ ಕೇಂದ್ರದಲ್ಲಿ ಬಿತ್ತನೆ ಬೀಜ ದರ ಸ್ವಲ್ಪ ಹೆಚ್ಚಿರುತ್ತದೆ. ಸಾಮಾನ್ಯ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಬಿತ್ತನೆ ಬೀಜದ ದರ ಸರ್ಕಾರ ಮಟ್ಟದಲ್ಲಿ ನಿಗದಿಪಡಿಸಲಾಗಿರುತ್ತದೆ. ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೆ ಇಲ್ಲಿಯೂ ಸಹ ದರ ಕಡಿಮೆ ಮಾಡುವ ಅವಕಾಶವಿರುತ್ತದೆ ಎಂದರು.
ಇದನ್ನೂ ಓದಿ: ನಾಳೆ ಧಾರವಾಡಕ್ಕೆ ಬರ ಅಧ್ಯಯನ ತಂಡ ಆಗಮನ: ಹಿಂಗಾರು ಬಿತ್ತನೆ ಆರಂಭ ಮಾಡಿದ ರೈತರ ಅಸಮಾಧಾನ