ಹುಬ್ಬಳ್ಳಿ: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಗಣೇಶ ಮತ್ತು ಮೊಹರಂ ಹಬ್ಬದ ಪಾಂಜಾ ದೇವರನ್ನು ಒಂದೇ ವೇದಿಕೆಯಲ್ಲಿ ಪ್ರತಿಷ್ಟಾಪನೆ ಮಾಡುವ ಮೂಲಕ ತಾಲೂಕಿನ ಬಿಡ್ನಾಳ್ ಗ್ರಾಮದ ಜನತೆ ಸೌಹಾರ್ದತೆ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ..
ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬ ಪ್ರತಿ 33 ವರ್ಷಕ್ಕೊಮ್ಮೆ ಕೂಡಿ ಬರುವಂತಹ ಹಬ್ಬಗಳಾಗಿದ್ದು, ಅಂದಿನಿಂದ ಈ ಎರಡು ಹಬ್ಬಗಳನ್ನು ಒಟ್ಟಿಗೆ ಆಚರಣೆ ಮಾಡುತ್ತ ಬಂದಿದ್ದಾರೆ ಈ ಗ್ರಾಮಸ್ಥರು. ಈ ಗ್ರಾಮದಲ್ಲಿ ಪ್ರತಿಯೊಂದು ಹಬ್ಬ ಹಾಗೂ ಕಾರ್ಯಕ್ರಮಗಳನ್ನು ಜಾತಿ ಭೇದವಿಲ್ಲದೇ ನಡೆಸಿಕೊಂಡು ಬರುತ್ತಿರುವುದು ವಿಶೇಷ.
ಬಿಡ್ನಾಳ ಗ್ರಾಮದಲ್ಲಿ ಗಣೇಶೋತ್ಸವ ಹಬ್ಬವನ್ನು ಕಳೆದ 45 ವರ್ಷಗಳಿಂದ ಆಚರಿಸಲಾಗುತ್ತಿದೆ. ಆದ್ದರಿಂದ ಮಂಡಳಿಗೆ ಗಜಾನನ ಹಾಗೂ ಮೊಹರಂ ಉತ್ಸವ ಸಮಿತಿ ಎಂದೇ ಸಮಿತಿಗೆ ಹೆಸರಿಡಲಾಗಿದೆ. ಮೊದಲಿಗೆ ಗಣೇಶನನ್ನು ಪ್ರತಿಷ್ಠಾಪಿಸಿ ನಂತರ ಬರುವ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಇದೀಗ ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಒಟ್ಟಿಗೆ ಆಚರಣೆ ಮಾಡಿದ್ದಾರೆ.
ಪ್ರತಿಷ್ಠಾಪಿಸಿರುವ ಗಣೇಶನ ವಿಸರ್ಜನೆಯೂ 9ನೇ ದಿನಕ್ಕೆ ನಡೆಯಲಿದೆ. ಅದೇ ದಿನ ಮೊಹರಂ ಹಬ್ಬದ ದೇವರು ಕಳುಹಿಸುವ ಕಾರ್ಯಕ್ರಮವೂ ಇದೆ. ಮೊದಲಿಗೆ ಮೊಹರಂ ಹಬ್ಬದ ದೇವರುಗಳನ್ನು ಕಳುಹಿಸಿ ಬಳಿಕ ಒಟ್ಟಾಗಿ ಗಣೇಶನ ವಿಸರ್ಜನೆ ಮಾಡುತ್ತಾರೆ..