ಹುಬ್ಬಳ್ಳಿ: ದೇಶದಲ್ಲಿ ಈ ಸಲ ಬಿಜೆಪಿಗೆ ಹಿನ್ನಡೆಯಾಗುತ್ತೆ. ಅದು ಈಗಾಗಲೇ ನಡೆದ ಮೊದಲ ಹಾಗೂ ಎರಡನೇ ಹಂತದ ಚುನಾವಣೆಯಿಂದ ಗೊತ್ತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಅಲೆ ಇದೆ ಎಂದು ವಿನಾ ಕಾರಣ ಬಿಂಬಿಸಲಾಗುತ್ತಿದೆ. ಅವರೆಲ್ಲೂ ತಮ್ಮ ಐದು ವರ್ಷದ ಸಾಧನೆ ಹಾಗೂ ಮುಂದಿನ ಯೋಜನೆ ಬಗ್ಗೆ ಮಾತನಾಡಿಲ್ಲ. ಇತ್ತೀಚೆಗೆ ಕಲಂ 379 ಬಗ್ಗೆ ಮಾತನಾಡುತ್ತಿದ್ದಾರೆ. ಏಕೆ ಐದು ವರ್ಷ ಏನೂ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ಐದು ವರ್ಷದ ಮೋದಿಯವರ ರಿಪೋರ್ಟ್ ಕಾರ್ಡ್ ಫೇಲ್ ಆಗಿದೆ. ಹೀಗಾಗಿ ಅವರು ಬೇರೆ ವಿಷಯವನ್ನೇ ಮಾತನಾಡುತ್ತಾರೆ. ಬಿಜೆಪಿಗೆ ವೋಟ್ ಹಾಕದಿರುವವರು ದೇಶದ್ರೋಹಿಗಳು ಎಂದಿರುವ ಅಮಿತ್ ಶಾ ಅವರ ಹೇಳಿಕೆಯಿಂದ ಜನರು ಬೇಸತ್ತಿದ್ದಾರೆ. ಹಾಗಾಗಿಯೇ ಈ ಸಲ ದೇಶದಲ್ಲಿ ಬಿಜೆಪಿಯೇತರ ಸರ್ಕಾರ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಯೋತ್ಪಾದನೆ, ಭದ್ರತೆ ಒಂದೇ ವಿಚಾರದಲ್ಲಿ ಮೋದಿ ಚುನಾವಣಾಗೆ ಹೊರಟಿದ್ದಾರೆ. ಜಮ್ಮು-ಕಾಶ್ಮಿರದಲ್ಲಿ ಪ್ರತ್ಯೇಕತಾವಾದಿಗಳ ಪರ ಒಲವು ಇರುವವರ ಜೊತೆ ಸೇರಿ ಸರ್ಕಾರ ರಚನೆ ಮಾಡಿದರು. ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹಾಳಾಗಿದೆ. ಇನ್ನು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದಷ್ಟು ಸುಳ್ಳು ಯಾರೂ ಹೇಳಿಲ್ಲ. ಜೋಶಿ ರೈತರಿಗೆ ಸುಳ್ಳು ಹೇಳಿ ಯಾಮಾರಿಸಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಮುಗಿದ ಅಧ್ಯಾಯ. ಮೋದಿಯಂತಹ ನಾಯಕ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.