ಹುಬ್ಬಳ್ಳಿ : ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮದಲ್ಲಿ ವರದಿಗಳಾಗಿದ್ದು, ಈ ಕುರಿತು ಮಾಹಿತಿ ಇಲ್ಲ. ಆದರೆ, ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು. ನಗರದ ರೈಲ್ವೆ ನಿಲ್ದಾಣದ ಬಳಿಯಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೂ ಸಹ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಇನ್ನು ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತವಾಗಿ ಎಲ್ಲ ನಾಯಕರೊಂದಿಗೆ ಇಂದು ವಿವೇಕಾನಂದ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದೇನೆ. ನನ್ನೊಂದಿಗೆ ಮಹೇಶ ತೆಂಗಿನಕಾಯಿ ಸೇರಿದಂತೆ ಇನ್ನಿತರ ನಾಯಕರು ಸಾತ್ ನೀಡಿದರು. ಸ್ವಾಮಿ ವಿವೇಕಾನಂದರು ಸಾಮಾಜಿಕವಾಗಿ ಎಲ್ಲರಿಗೂ ಪ್ರೇರಣೆ ಕೊಡುವ ಕೆಲಸ ಮಾಡಿದ್ದಾರೆ ಎಂದರು.
ಕತ್ತಲೆಯಿಂದ ಬೆಳಕಿನ ಅಗಾಧ ಶಕ್ತಿ ಹೊಂದಿದ್ದವರು ವಿವೇಕಾನಂದರು. ಅವರ ಜನ್ಮದಿನ ನಿಮಿತ್ತ ಹು-ಧಾ ಅವಳಿನಗರದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಆಚರಣೆ ಮಾಡಲಾಗುತ್ತಿದೆ. ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ಆಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು. ಬಹುತೇಕ ರಾಜಕೀಯ ಪಕ್ಷಗಳು ಜನರನ್ನು ಕರೆದುಕೊಂಡು ಕಾರ್ಯಕ್ರಮ ಮಾಡುವ ಕೆಲಸ ಹೆಚ್ಚಾಗಿವೆ. ಆದರೆ ಯುವ ಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಜನರನ್ನು ನಿಯಂತ್ರಣ ಮಾಡೋದೇ ದೊಡ್ಡ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.
ಫೆ. 2 ರಿಂದ ಹುಬ್ಬಳ್ಳಿ-ಪುಣೆ ವಿಮಾನ ಯಾನ ಆರಂಭವಾಗಲಿದ್ದು, ಅದು ಸದ್ಯ ಎರಡು ದಿನಗಳಿದ್ದು ಅದನ್ನು ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲು ಕೇಂದ್ರ ಸಚಿವ ರಾಜನಾಥಸಿಂಗ್ ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಮೋದಿ ಸಂಚರಿಸುವ ಮಾರ್ಗದಲ್ಲಿ ಕ್ಯಾನ್ವೇ ಚೆಕ್ ಆಫ್: ಝಡ್ ಪ್ಲಸ್ ಸೆಕ್ಯುರಿಟಿಯಲ್ಲಿ ಹೈ ಅಲರ್ಟ್: ಮಾರ್ಗದುದ್ದಕ್ಕೂ ರಂಗೋಲಿ ಸ್ವಾಗತ..
ಇನ್ನೊಂದೆಡೆ, ಯುವಜನೋತ್ಸವ ಸಮಾರಂಭ ಹಿನ್ನೆಲೆ ಹುಬ್ಬಳ್ಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಅಲ್ಲದೇ ಮೋದಿಯವರು ಸಂಚರಿಸುವ ಮಾರ್ಗದಲ್ಲಿ ಝಡ್ ಪ್ಲಸ್ ಸೆಕ್ಯೂರಿಟಿ ಹಾಗೂ ಎಸ್.ಪಿ.ಜಿ ಸೆಕ್ಯುರಿಟಿಯಿಂದ ಕ್ಯಾನ್ವೇ ಚೆಕ್ ಆಫ್ ಮಾಡಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣದಿಂದ ಗೋಕುಲ ರಸ್ತೆಯ ಮೂಲಕ ಹಾದು ರೈಲ್ವೆ ಮೈದಾನಕ್ಕೆ ತೆರಳುವ ಮಾರ್ಗದಲ್ಲಿ ಎಂಟು ಕಡೆಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಲಿದ್ದು, ಈ ನಿಟ್ಟಿನಲ್ಲಿ ಕ್ಯಾನ್ವೇ ಚೆಕ್ ಆಫ್ ಮಾಡಲಾಯಿತು. ಇನ್ನು ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದ್ದು, ವಿಮಾನ ನಿಲ್ದಾಣದ ಒಳಗೆ ಮತ್ತೆ ಹೊರಗೆ ಝಡ್ ಪ್ಲಸ್ ಸೆಕ್ಯುರಿಟಿಯ ಕ್ಯಾನ್ವೇ ಚೆಕ್ ಆಫ್ ಮಾಡಲಾಯಿತು.
ಮೋದಿ ಸಂಚರಿಸುವ ಮಾರ್ಗದುದ್ದಕ್ಕೂ ರಂಗೋಲಿ ಸ್ವಾಗತ: ಮೋದಿಯವರ ಆಗಮನಕ್ಕೆ ಹುಬ್ಬಳ್ಳಿ ನಗರವೇ ವರ್ಣರಂಜಿತವಾಗಿದ್ದು, ಎಲ್ಲೆಡೆಯೂ ಕೇಸರಿಮಯವಾಗಿದೆ. ಆದರೆ ಮಹಿಳೆಯರು ತಮ್ಮಲ್ಲಿರುವ ಅಭಿಮಾನವನ್ನು ರಂಗೋಲಿ ಮೂಲಕ ಪ್ರದರ್ಶನ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಎದುರು ಹಾಗೂ ಗೋಕುಲ ರಸ್ತೆಯಲ್ಲಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಕ್ಕೆ ಉತ್ಸುಕರಾಗಿದ್ದು, ಕ್ಷಣದಿಂದ ಕ್ಷಣಕ್ಕೆ ಕಾತರತೆಯಿಂದ ಕಾಯುತ್ತಿದ್ದಾರೆ.
ಓದಿ: ಸೆಲ್ಫಿ ಸ್ಪಾಟ್ ಆಯ್ತು ಹುಬ್ಬಳ್ಳಿ ಚೆನ್ನಮ್ಮ ವೃತ್ತ; ರಂಗೋಲಿಯಲ್ಲಿ ಅರಳಿದ ಮೋದಿ ಚಿತ್ರ