ಹುಬ್ಬಳ್ಳಿ: ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಅವಳಿನಗರದ ರಾಜಕಾರಣಿಗಳ ಮನೆಗೆ ಹೆಚ್ಚಿನ ಭದ್ರತೆ ಒದಗಿಸಿದೆ.
ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಅವಳಿನಗರ ಸೇರಿದಂತೆ ಧಾರವಾಡ ಜಿಲ್ಲೆಯ ಎಲ್ಲ ಶಾಸಕರು, ಸಚಿವರ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹುಬ್ಬಳ್ಳಿಯ ಮಯೂರ ಪಾರ್ಕ್‌ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನೆ, ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿಯ ರಾಜ್ಯ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮನೆ, ಅಕ್ಷಯ ಪಾರ್ಕ್‌ನಲ್ಲಿರುವ ಶಾಸಕ ಅರವಿಂದ ಬೆಲ್ಲದ ಮನೆ, ಶಾಸಕ ಪ್ರಸಾದ್ ಅಬ್ಬಯ್ಯ ಸೇರಿದಂತೆ ಉಳಿದ ಶಾಸಕರ ಮನೆಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಅವಳಿನಗರ ಪೊಲೀಸ್ ಕಮಿಷನರೇಟ್‌ನ ಆಯಾ ಪೊಲೀಸ್ ಠಾಣೆ ಸಿಬ್ಬಂದಿಯನ್ನು ರಕ್ಷಣೆಗೆ ನಿಯೋಜನೆ ಮಾಡಲಾಗಿದೆ.