ಹುಬ್ಬಳ್ಳಿ: ಮಳೆಗಾಲದ ವೇಳೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಪ್ರತಿ ವಾರ್ಡ್ ಅಧಿಕಾರಿಗಳು ಎಚ್ಚರ ವಹಿಸಬೇಕು. ಅಲ್ಲದೇ ಡೆಂಘಿ, ಕಾಲರಾಗಳಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹು-ಧಾ ಪೂರ್ವ ಮತಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿಂದು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭಗೊಂಡಿದ್ದು, ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತತಕ್ಷಣ ಪರಿಣಾಮ ಬೀರುವಂತೆ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಹಾಯಕ್ಕೆ ಕೈ ಜೋಡಿಸಬೇಕು ಎಂದು ಅವರು ಆಗ್ರಹಿಸಿದರು.
ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಹೂಳು ತುಂಬಿರುವ ಚರಂಡಿಗಳನ್ನು ಶೀಘ್ರವಾಗಿ ಸ್ವಚ್ಛಗೊಳಿಸಬೇಕು. ಅಲ್ಲದೇ ಸೊಳ್ಳೆಗಳಿಂದ ಹಾಗೂ ಮಳೆ ನೀರು ಒಂದೆಡೆ ನಿಂತು ರೋಗಗಳು ಬರುವ ಸಾಧ್ಯತೆಗಳಿರುವುದರಿಂದ ಕೀಟ ನಾಶಕ ಸ್ಪ್ರೇ ಮಾಡಬೇಕು ಎಂದು ಸಲಹೆ ನೀಡಿದರು. ಪ್ರತಿ ವಾರ್ಡ್ನಲ್ಲಿ ಕೂಡ ಮಳೆಗಾಲದ ಹಾಗೂ ಮಳೆಯ ಪ್ರಮಾಣದ ಕುರಿತು ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಮಳೆಯ ಮುಂಚಿತವಾಗಿ ಸಿದ್ದತಾ ಕ್ರಮ ಕೈಗೊಳ್ಳಬೇಕು ಅಲ್ಲದೇ ಕಾರ್ಮಿಕರಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸುವ ಮೂಲಕ ಕೆಲಸ ಒದಗಿಸಬೇಕು ಎಂದರು.
ಮಳೆಯಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ನನ್ನ ಶೂಗಳ ಬಗ್ಗೆ ಗಮನ ಹರಿಸಿಲ್ಲ. ಇಲ್ಲಿ ಮಾನವೀಯತೆಯ ಬಗ್ಗೆ ಚಿಂತಿಸಬೇಕು ವಿನಃ ಕೀಳು ಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಗನ್ ಮ್ಯಾನ್ ಕಡೆಯಿಂದ ಶೂ ಎತ್ತಿಡಿಸಿದ್ದಾರೆ ಎಂಬ ಆರೋಪದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಜನರು ಸಾವು ನೋವಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಅವರ ಜೀವ ರಕ್ಷಣೆ ನನ್ನ ಗುರಿಯಾಗಿತ್ತು. ಆಗ ನಾನು ಯಾವುದೇ ಶೂಗಳ ಬಗ್ಗೆ ಕೂಡ ಗಮನ ಹರಿಸಿಲ್ಲ ಎಂದರು.
ಅಲ್ಲದೇ, ಮನೆಗಳಿಗೆ ನೀರು ತುಂಬಿದ್ದು, ಅವರನ್ನು ರಕ್ಷಿಸಲು ಹೋಗುವಾಗ ಪಾಲಿಕೆ ಸದಸ್ಯರೊಬ್ಬರು ನಿವು ನಮ್ಮ ಸಹೋದರ ಎಂದು ಶೂಗಳನ್ನು ತೆಗೆದುಕೊಂಡರು ಆದರೇ ನಾನು ಅವರಿಂದ ಕಸಿದುಕೊಂಡೆ ಆದರೇ ಯಾರೋ ನನ್ನ ಕೈಯಲ್ಲಿದ್ದ ಶೂಗಳನ್ನು ಕಸಿದುಕೊಂಡರು. ಆ ಬಗ್ಗೆ ನಾನು ಗಮನ ಹರಿಸಿಲ್ಲ ಅಲ್ಲದೇ ಮಾನವೀಯತೆಯಿಂದ ನಾವು ಮಾಡಿದ ಕೆಲಸಗಳನ್ನು ವಿಡಿಯೋ ಮಾಡುವುದನ್ನು ಬಿಟ್ಟು ಇಂತಹ ಕೀಳು ಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.