ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹಾಲಿ ಶಾಸಕ ಅಮೃತ್ ದೇಸಾಯಿ ಅವರಿಗೆ ಮತ್ತೊಮ್ಮೆ ಬಿಜೆಪಿ ಮಣೆ ಹಾಕಿದೆ. ಇದರಿಂದ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಲಿ ಶಾಸಕ ಇರುವಾಗಲೇ ಪಕ್ಷದಲ್ಲಿ ಮೂವರು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರು. ಬಯಲು ಸೀಮೆ ಅಧ್ಯಕ್ಷ ತವನಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ಟಿಕೆಟ್ ನೀಡುವಂತೆ ವರಿಷ್ಠರ ಬೆನ್ನು ಹತ್ತಿದ್ದರು. ಕೊನೆಗೂ ಮತ್ತೊಮ್ಮೆ ಬಿಜೆಪಿ ನಾಯಕರು ದೇಸಾಯಿಗೆ ಟಿಕೆಟ್ ನೀಡಿದ್ದಾರೆ.
ಅಮೃತ್ ದೇಸಾಯಿ ಅವರಿಗೆ ಮಣೆ ಹಾಕಿರುವ ಹಿನ್ನೆಲೆ ಅವರ ಸ್ನೇಹಿತ ಕಳೆದ ಚುನಾವಣೆಯಲ್ಲಿ ಬೆನ್ನೆಲುವಾಗಿ ನಿಂತಿದ್ದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಲಕ್ಷಣ ಕಂಡುಬಂದಿವೆ. ಟಿಕೆಟ್ ವಂಚಿತರು ಸಹ ಯಾರಿಗೆ ಬೆಂಬಲ ನೀಡ್ತಾರೆ ಎಂಬುದು ಇದೀಗ ರಾಜಕೀಯ ಪಾಳಯದಲ್ಲಿ ಚರ್ಚಗೆ ಗ್ರಾಸವಾಗಿದೆ.
ಧಾರವಾಡ ಗ್ರಾಮೀಣ ಕ್ಷೇತ್ರ ಜಿಲ್ಲೆಯಲ್ಲಿ ಬಹಳ ಜಿದ್ದಾಜಿದ್ದಿನ ಕ್ಷೇತ್ರ ಎಂದು ಹೆಸರು ಪಡೆದುಕೊಂಡಿದೆ. ಇಲ್ಲಿ ಒಮ್ಮೆ ಮಣೆ ಹಾಕಿದವರಿಗೆ ಮತ್ತೊಮ್ಮೆ ಮಣೆ ಹಾಕಲು ಮತದಾರರು ಹಿಂದೇಟು ಹಾಕುತ್ತಾರೆ. ಒಬ್ಬರಿಗೆ ಒಂದೇ ಬಾರಿ ಅವಕಾಶ ನೀಡುವ ಕ್ಷೇತ್ರ ಅಂದ್ರೆ ಅದು ಧಾರವಾಡ ಗ್ರಾಮೀಣ ಕ್ಷೇತ್ರ. ಹೀಗಾಗಿ ಕಳೆದ ಬಾರಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ಅಮೃತ ದೇಸಾಯಿ ಅವರು ಜಯ ಗಳಿಸಿದ್ದರು.
ತಾಯಿ ಆಶೀರ್ವಾದ ಪಡೆದ ಶಾಸಕ: ಬಿಜೆಪಿ ಧಾರವಾಡ ಗ್ರಾಮೀಣ ಟಿಕೆಟ್ ಘೋಷಣೆ ಹಿನ್ನೆಲೆ ಶಾಸಕ ಅಮೃತ್ ತಾಯಿ ಇಂದಿರಾ ದೇಸಾಯಿ ಅವರ ಆಶೀರ್ವಾದ ಪಡೆದುಕೊಂಡರು. ಟಿಕೆಟ್‌ಗಾಗಿ ಗೊಂದಲ್ಲಿದ್ದ ಅವರಿಗೆ ಸದ್ಯ ಟಿಕೆಟ್ ಸಿಕ್ಕಿರುವುದು ನಿರಾಳರಾಗಿದ್ದಾರೆ.
ಒಗ್ಗಟ್ಟಿನ ಮಂತ್ರ ಜಪಿಸಿದ ಬಿಜೆಪಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹಾಲಿ ಶಾಸಕ ಅಮೃತ್ ದೇಸಾಯಿ ಅವರ ಬದಲಿಗೆ ತಮಗೆ ಟಿಕೆಟ್ ನೀಡಬೇಕು ಎಂದು ತವನಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ಅವರು ಪ್ರತ್ಯೇಕ ಸಭೆ ನಡೆಸಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಬಿಜೆಪಿ ನಾಯಕರು ಈ ಬಂಡಾಯ ತಣಿಸಲು ಆಣೆ, ಪ್ರಮಾಣದ ಮೊರೆ ಹೋಗಿದ್ದಾರೆ.
ಅಮೃತ್ ಅವರ ಬದಲಿಗೆ ತವನಪ್ಪ ಅಷ್ಟಗಿ, ಸೀಮಾ ಮಸೂತಿ ಹಾಗೂ ಸವಿತಾ ಅಮರಶೆಟ್ಟಿ ಈ ಮೂವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಅಲ್ಲದೇ ಅಮೃತ ದೇಸಾಯಿ ಅವರನ್ನು ಬಿಟ್ಟು ಇತರ ಮುಖಂಡರು ಪ್ರತ್ಯೇಕ ಸಭೆ ಕೂಡ ನಡೆಸಿದ್ದರು. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯಲ್ಲಿ ಬಂಡಾಯ ಏಳದಂತೆ ಪಕ್ಷ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಲ್ಲದೇ ಎಲ್ಲಾ ನಾಯಕರನ್ನು ಒಂದೆಡೆ ಸೇರಿಸಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿದ್ದಲ್ಲದೇ ಪಕ್ಷಕ್ಕೆ ಬದ್ಧರಾಗಿರುವಂತೆ ಆಣೆ, ಪ್ರಮಾಣ ಮಾಡಿಸಿದ್ದಾರೆ.
ಹಾಲಿ ಶಾಸಕ ಅಮೃತ್ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆ ಕೂಡ ನಡೆಸಿದ್ದಾರೆ. ಆ ಮೂಲಕ ಬಂಡಾಯ ಶಮನ ಮಾಡಲು ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಪಕ್ಷಕ್ಕೆ ಬದ್ಧರಾಗಿರುವುದು, ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಅಭ್ಯರ್ಥಿಯನ್ನು ಗೆಲ್ಲಿಸುವ ಬಗ್ಗೆ ಬಿಜೆಪಿ ಮುಖಂಡರು ಟಿಕೆಟ್ ಆಕಾಂಕ್ಷಿಗಳಿಗೆ ಪ್ರಮಾಣ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಧಾರವಾಡ ಗ್ರಾಮೀಣ ಕ್ಷೇತ್ರ: ಬಿಜೆಪಿಯಿಂದ ಈ ಬಾರಿ ಯಾರಿಗೆ ಟಿಕೆಟ್?