ಹುಬ್ಬಳ್ಳಿ : ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ಹಲವಾರು ಪ್ರಾಣಿಗಳು ಆಹಾರವಿಲ್ಲದೇ ಹಸಿವಿನಿಂದ ಬಳಲುತ್ತಿದ್ದನ್ನು ಕಂಡ ಒಂದು ಗೆಳೆಯರ ಬಳಗ. ಮೂಕ ಪ್ರಾಣಿಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.
ನಗರದ ಗೆಳೆಯರ ಬಳಗವಾದ 'ಮಿಷನ್ ಹಂಗರ್ ಟೀಂ', ಅವಳಿ ನಗರದಲ್ಲಿ ಶ್ವಾನಗಳು ಹಾಗೂ ಬಿಡಾಡಿ ದನಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದೆ. ಇನ್ನು, ಪ್ರತಿದಿನ 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ಒದಗಿಸುತ್ತಿರುವ ಇವರು 40ಕ್ಕೂ ಹೆಚ್ಚು ಬಿಡಾಡಿ ದನಗಳಿಗೆ ಆಹಾರ ನೀಡುತ್ತಿದ್ದಾರೆ. ತಾವೇ ಖುದ್ದಾಗಿ ಆಹಾರವನ್ನು ತಯಾರಿಸಿ ಪ್ರಾಣಿಗಳಿಗೆ ಆಹಾರ ಪೂರೈಸುತ್ತಿದ್ದಾರೆ. ಇವರ ಕಾರ್ಯಕ್ಕೆ ಹುಬ್ಬಳ್ಳಿಯಲ್ಲಿ ಅಪೂರ್ವ ಬೆಂಬಲ ಸಿಕ್ಕಿರುವುದು ಖುಷಿಯ ವಿಚಾರ.
ಮನುಷ್ಯನಿಗೆ ಹಸಿವು ಆದರೆ ಬಾಯಿ ಇದ್ದವನು ತನಗೆ ಏನಾದರೂ ಬೇಕು ಎಂದರೆ ಕೇಳಿ, ಕದ್ದು, ಪಡೆಯುತ್ತಾನೆ. ಆದರೆ, ಪ್ರಾಣಿಗಳು ಏನೂ ಮಾಡಬೇಕು ಎಂಬುದನ್ನು ಅರಿತ ಈ ಟೀಂ ಪ್ರಾಣಿಗಳಿಗೆ ಪ್ರತಿ ದಿನ ಬಿಸ್ಕೀಟ್, ನುಚ್ಚು, ಹಾಲು ಹಾಗೂ ಮೊಟ್ಟೆಯನ್ನು ಹಾಕುತ್ತಿದ್ದಾರೆ. ಇದನ್ನು ವರ್ಷದ 365 ದಿನವು ಮಾಡುವ ಹಂಬಲವನ್ನು ಈ ತಂಡ ಹೊಂದಿದ್ದು, ಅದಕ್ಕಾಗಿ ಹಲವಾರು ಸಂಸ್ಥೆಗಳು ಬೆಂಬಲದ ಜೊತೆಗೆ ಸಹಾಯ ಹಸ್ತ ಚಾಚಲು ಮುಂದೆ ಬಂದಿದೆ.
ಸ್ವಂತ ಖರ್ಚಿನಲ್ಲಿ ಪ್ರತಿದಿನ ಶ್ವಾನಗಳಿಗೆ ಮತ್ತು ಹಸುಗಳಿಗೆ ಆಹಾರ ಸಿದ್ಧಪಡಿಸಿ ಅವಳಿನಗರದ ವಿವಿಧ ನಗರದ ಶ್ವಾನಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಇನ್ನು, ಬಿಡಾಡಿ ದನಗಳಿಗೆ ಸ್ವತಃ ಎಪಿಎಂಸಿಗಳಿಗೆ ಹೋಗಿ ತರಕಾರಿ ಮಾರುಕಟ್ಟೆ ಮುಗಿದ ಮೇಲೆ, ಬಿದ್ದ ತರಕಾರಿ ಕಸವನ್ನು ಸಂಗ್ರಹಿಸಿ ಅವುಗಳನ್ನು ಚೀಲಗಳಲ್ಲಿ ತುಂಬಿ ದನಗಳಿಗೆ ಹಾಕುವ ಮೂಲಕ ಮೂಕ ಪ್ರಾಣಿಗಳ ಆಪ್ತ ಬಾಂಧವರಾಗಿದ್ದಾರೆ. ಈ ಮೂಲಕ 'ಮಿಷನ್ ಹಂಗರ್ ಟೀಂ' ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ.