ಹುಬ್ಬಳ್ಳಿ : 23 ಪಾರಿವಾಳಗಳನ್ನು ಕತ್ತು ಕೊಯ್ದು ಕೊಂದಿರುವ ಘಟನೆ ಹುಬ್ಬಳ್ಳಿಯ ಗೋಕುಲ್ ರೋಡ್ ಯಾವಗಲ್ ಫ್ಲಾಟ್ನಲ್ಲಿ ಶನಿವಾರ ನಡೆದಿದೆ. ರಾಹುಲ್ ದಾಂಡೇಲಿ ಎಂಬವರು ಸಾಕಿದ್ದ 23 ಪಾರಿವಾಳಗಳನ್ನು ಹಾಗೂ ಪಾರಿವಾಳದ ಮೊಟ್ಟೆಯನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಅಲ್ಲದೇ ಪಾರಿವಾಳಗಳ ಗೂಡನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಈ ಕುರಿತು ಪಾರಿವಾಳಗಳ ಮಾಲೀಕ ರಾಹುಲ್ ದಾಂಡೇಲಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರುದಾರ ರಾಹುಲ್ ದಾಂಡೇಲಿ ಸಹೋದರ ನಿಖಿಲ್ ದಾಂಡೇಲಿ ಈ ಬಗ್ಗೆ ಮಾತನಾಡಿ, ಶನಿವಾರ ರಾತ್ರಿ 3 ಗಂಟೆ ಸುಮಾರಿಗೆ ಕೆಲ ದುಷ್ಕರ್ಮಿಗಳು ಮನೆಯಲ್ಲಿ ಸಾಕಿದ್ದ ಪಾರಿವಾಳವನ್ನು ಕೊಂದು ಹಾಕಿದ್ದಾರೆ. ಈ ವೇಳೆ ಮನೆಯವರು ಮಲಗಿದ್ದರು. ಅಲ್ಲದೇ ಹೊಸೂರು ಪ್ಲೈಓವರ್ ಕಾಮಗಾರಿ ನಡೆಯುತ್ತಿರುವುದರಿಂದ ದುಷ್ಕರ್ಮಿಗಳ ಕೃತ್ಯ ನಮ್ಮ ಗಮನಕ್ಕೆ ಬಂದಿಲ್ಲ. ಬೆಳಗ್ಗೆ ಎದ್ದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.
ನಮ್ಮ ಕಿರಿಯ ಸಹೋದರ ಗೌತಮ್ ಎಂಬಾತನಿಗೆ ಎಲುಬು ಸಂಬಂಧಿತ ಕಾಯಿಲೆ ಇದೆ. ಆತನಿಗೆ ಹೆಚ್ಚು ಓಡಾಡಲು ಆಗುವುದಿಲ್ಲ. ಈ ಸಂಬಂಧ ಆತನಿಗಾಗಿ ನಾವು ಕಳೆದ ಐದು ವರ್ಷದ ಹಿಂದೆ ಒಂದೆರಡು ಪಾರಿವಾಳವನ್ನು ಖರೀದಿ ಮಾಡಿದ್ದೆವು. ಗೌತಮ್ ಅವುಗಳ ಲಾಲನೆ ಪಾಲನೆ ಮಾಡಿ ಒಂದು ಗೂಡು ಕಟ್ಟಿಕೊಂಡು ಅವುಗಳ ಸಾಕಣೆ ಮಾಡುತ್ತಿದ್ದ. ಆದರೆ ಯಾರೋ ಕಿಡಿಗೇಡಿಗಳು ಹೊಟ್ಟೆಕಿಚ್ಚಿನಿಂದ ಮತ್ತು ಹಳೇ ವೈಷಮ್ಯದಿಂದ ಹೀನಕೃತ್ಯ ಮಾಡಿದ್ದಾರೆ ಎಂದರು.
ಪಾರಿವಾಳಗಳು ಏನು ತಪ್ಪು ಮಾಡಿದ್ದವು. ಯಾರಿಗಾದ್ರೂ ನಮ್ಮ ಕುಟುಂಬದ ಮೇಲೆ ಸಿಟ್ಟಿದ್ದರೆ ನೇರವಾಗಿ ಹೇಳಬೇಕಿತ್ತು. ಪಾಪ ಮೂಕ ಪಕ್ಷಿಗಳ ಹತ್ಯೆ ಮಾಡಿ ಹೋಗಿದ್ದಾರೆ. ಇದರಿಂದ ನಮ್ಮ ಸಹೋದರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಆತನನ್ನು ಸಮಾಧಾನಪಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಸಹೋದರನನ್ನು ಧರ್ಮಸ್ಥಳಕ್ಕೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಹಳೇ ದ್ವೇಷದ ಹಿನ್ನೆಲೆ ಪಾರಿವಾಳ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದ್ದು, ಪಾರಿವಾಳ ಸಾಯಿಸಿದವರನ್ನು ಕೂಡಲೇ ಬಂಧಿಸುವಂತೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪೊಲೀಸರು ಆರೋಪಿಗಳ ಚಲನವಲನಗಳನ್ನು ಪತ್ತೆಹಚ್ಚಲು ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೆ ಮುಂದಾಗಿದ್ದಾರೆ. ಜೊತೆಗೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : 12 ನಾಟಿ ಕೋಳಿ ತಿಂದು ಹಾಕಿದ ಬೀದಿ ನಾಯಿಗಳು: ಗ್ರಾಮ ಪಂಚಾಯತ್ಗೆ ದೂರು