ಧಾರವಾಡ: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪದಲ್ಲಿ ಬಿಜೆಪಿ ನಾಯಕರ ಹೆಸರು ಸಹ ಇದೆ ಎಂದು ಡಿಕೆಶಿ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಯಾರ ಜೊತೆ ನಂಟಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಡ್ರಗ್ಸ್ ಪ್ರಕರಣದ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಬೇಕು ಎಂದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಯಾವ ನಾಯಕರ ಜೊತೆ ಆರೋಪಿಗಳು ಇದ್ದರೆಂಬುದನ್ನು ನೋಡುತ್ತಿದ್ದೇವೆ. ಇದನ್ನು ಪಕ್ಷಾತೀತವಾಗಿ ವಿರೋಧಿಸಬೇಕು. ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಇನ್ನು ಶಾಲೆ ಆರಂಭಿಸುವ ವಿಚಾರವಾಗಿ ಮಾತನಾಡಿದ ಅವರು, ಸೆ. 21ರಿಂದ 9-12ನೇ ತರಗತಿಯವರೆಗೆ ಅವಕಾಶ ಕೊಡಲಾಗಿದೆ. ಈ ನಾಲ್ಕು ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಬಂದು ಮಾರ್ಗದರ್ಶನ ಪಡೆಯಬಹುದು. ಈಗಾಗಲೇ ಕೇಂದ್ರದಿಂದ ಎಸ್ಒಪಿ ಬಂದಿದೆ. ನಮ್ಮ ರಾಜ್ಯದ ಎಸ್ಒಪಿಯನ್ನು ತಯಾರು ಮಾಡುತ್ತಿದ್ದೇವೆ. ಸೆ. 12 ಅಥವಾ 13ರಂದು ಪ್ರಕಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.