ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ಬದಲಾವಣೆ ಪ್ರಶ್ನೆ ಉದ್ಭವಿಸಿಲ್ಲ. ವಿನಾಕಾರಣ ನನ್ನ ಹೆಸರು ಮಧ್ಯದಲ್ಲಿ ಎಳೆದು ತರಲಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಿರುವ ಶ್ರೀಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇಂತಹದರಲ್ಲಿ ಉತ್ತರಾಧಿಕಾರಿ ನೇಮಕ ಪ್ರಶ್ನೆ ಬರೋದಿಲ್ಲ. ಉತ್ತರಾಧಿಕಾರಿ ವಿಷಯವಾಗಿ ನನ್ನ ಹೆಸರನ್ನ ಸುಮ್ಮನೆ ಎಳೆತರಲಾಗ್ತಿದೆ. ಈ ಬಗ್ಗೆ ಯಾರೊಂದಿಗೂ ನಾನು ಮಾತಾಡಿಲ್ಲ ಎಂದು ಸ್ಪಷಪಡಿಸಿದರು.
ಮೂರುಸಾವಿರ ಮಠ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ದಿಂಗಾಲೇಶ್ವರ ಶ್ರೀಗಳು ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಿನ್ನೆ ರಾತ್ರಿ ದಿಂಗಾಲೇಶ್ವರ ಶ್ರೀಗಳು ಹಾಗೂ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಶ್ರೀಗಳು ಗುಪ್ತ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.