ಧಾರವಾಡ : "ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಇದಕ್ಕೆ ನಮ್ಮ ಐದು ಕಾರ್ಯಕ್ರಮಗಳೇ ಸಾಕ್ಷಿ. ಮುಂದಿನ ದಿನಗಳಲ್ಲಿ ಯುವನಿಧಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಆರಂಭವಾಗಲಿದೆ" ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಜಿಲ್ಲೆಯಲ್ಲಿಂದು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, "ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಾ ಬಂದಿದೆ. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಇಂದು ಸುಮಾರು 60 ಸಾವಿರ ಕೋಟಿ ರೂಪಾಯಿಗಳನ್ನು ವಿವಿಧ ಯೋಜನೆ ಮೂಲಕ ಬಡವರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ" ಎಂದು ಹೇಳಿದರು.
"ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಸದ್ಯ ಐದು ಕೆಜಿ ಅಕ್ಕಿ ಕೊಡಲಾಗುತ್ತಿದೆ. ಇದರಲ್ಲೂ ಬಿಜೆಪಿಯವರು ರಾಜಕೀಯ ಮಾಡಿದರು. ಇದು ರಾಜ್ಯ ಸರ್ಕಾರದ ಅಕ್ಕಿ ಅಲ್ಲ ನರೇಂದ್ರ ಮೋದಿ ಅವರ ಅಕ್ಕಿ ಎಂದು ಹೇಳಿದರು. ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿ ಅದು ನರೇಂದ್ರ ಮೋದಿ ಅವರ ಅಕ್ಕಿಯಲ್ಲ. ಇದು ಯುಪಿಎ ಸರ್ಕಾರದ ಅವಧಿಯಲ್ಲಿ ಯಾರೂ ಹಸುವಿನಿಂದ ಬಳಲಬಾರದು ಎಂದು ಆಹಾರ ಭದ್ರತೆ ಕಾನೂನು ತಂದು ದೇಶದ ಎಲ್ಲಾ ರಾಜ್ಯಗಳಿಗೆ ಅಕ್ಕಿಯನ್ನು ವಿತರಿಸುತ್ತಿದೆ. ಇದು ನರೇಂದ್ರ ಮೋದಿ ಸರ್ಕಾರದ ಕಾರ್ಯಕ್ರಮ ಅಲ್ಲ. ಇದು ಯುಪಿಎ ಸರ್ಕಾರದ ಕೊಡುಗೆ" ಎಂದರು.
"ಆಹಾರ ಭದ್ರತೆ ಕಾಯಿದೆ ತಂದಿದ್ದು ಕಾಂಗ್ರೆಸ್ ಸರ್ಕಾರ. 2013ರಿಂದ 18ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಬಡ್ಡಿರಹಿತ ಸಾಲ ಆರಂಭಿಸಿದ್ದು ಸಿದ್ದರಾಮಯ್ಯನವರು. ಈ ಸಲ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ. ಸರ್ಕಾರಿ ಶಾಲೆಗಳಿಗೆ ಹಾಲು, ಬಿಸಿಯೂಟ ಸೇರಿ ಎಲ್ಲ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ" ಎಂದು ತಿಳಿಸಿದರು.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ : ಹತ್ತು ವರ್ಷದ ಮೋದಿ ಆಡಳಿತದಲ್ಲಿ ರೈತರಿಗೆ ಏನು ಅನುಕೂಲ ಆಗಿದೆ ಎಂದು ಪ್ರಶ್ನಿಸಿದರು. "ಉದ್ದಿಮೆದಾರರ 25 ಲಕ್ಷ ಕೋಟಿ ಸಾಲ ಮನ್ನಾ ಆಗಿದೆ. ನೋಟು ಅಮಾನ್ಯೀಕರಣ ಮಾಡಿದ್ದರು. ಅದರಿಂದ ಸಾಕಷ್ಟು ಹಣ ಬ್ಯಾಂಕ್‌ಗೆ ಹೋಗಿತ್ತು. ಆದರೆ ಆ ಹಣದಿಂದ ರೈತರಿಗೆ ಯಾವ ಲಾಭವೂ ಆಗಿಲ್ಲ. ಎಲ್ಲ ಹಣ ಉದ್ದಿಮೆದಾರರಿಗೆ ಹೋಗಿದೆ. 9 ವರ್ಷದಲ್ಲಿ ಸಣ್ಣ ಉದ್ಯಮಗಳಿಗೆ ಸಬ್ಸಿಡಿ ಕೊಟ್ಟಿಲ್ಲ, ಸಾಲ ಮನ್ನಾ ಆಗಿಲ್ಲ. ಆದ್ರೆ ದೊಡ್ಡ ಉದ್ಯಮಿಗಳ ಸಾಲ ಮಾತ್ರ ಮನ್ನಾ ಆಗಿದೆ" ಎಂದು ಟೀಕಿಸಿದರು.
"ಶೇ. 94ರಷ್ಟು ಜನ ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಶೇ. 80ಕ್ಕಿಂತ ಹೆಚ್ಚು ಜನ ಧಾರವಾಡ ಜಿಲ್ಲೆಯಲ್ಲಿ ನೋಂದಣಿ ಮಾಡಿದ್ದಾರೆ. 5.20 ಲಕ್ಷ ಗ್ರಾಹಕರಲ್ಲಿ 4.20 ಲಕ್ಷ ಜನ ಫಲಾನುಭವಿ ಆಗಿದ್ದಾರೆ. ಉಳಿದವರೂ ಶೀಘ್ರ ನೋಂದಣಿ ಮಾಡಿಕೊಳ್ಳಬೇಕು. ದಿವಾಳಿ ಎದ್ದು ಹೋಗಿದ್ದ ಕರ್ನಾಟಕ ಸರ್ಕಾರದ ವ್ಯವಸ್ಥೆ ಸರಿ ಮಾಡಿದ್ದಾರೆ. ಅದನ್ನು ಸರಿ ಮಾಡಿ ಬಡವರ ಮನೆಗೆ 60 ಸಾವಿರ ಕೋಟಿ ತಲುಪುವಂತೆ ಮಾಡಿದ್ದಾರೆ" ಎಂದರು.
ನವಲಗುಂದ ಶಾಸಕ ಕೋನರೆಡ್ಡಿ ಮಾತನಾಡಿ, "ಕೇಂದ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಣ್ಣತಮ್ಮಂದಿರು ಇದ್ದಂತೆ. ರಾಜ್ಯದ ಕಾರ್ಯಕ್ರಮಗಳಿಗೆ ಕೇಂದ್ರದವರನ್ನು ಕರೆಯುತ್ತೇವೆ. ಕೇಂದ್ರದ ಎಲ್ಲ ಜನಪ್ರತಿನಿಧಿಗಳನ್ನು ಕರೆಯುತ್ತೇವೆ. ಆದರೆ ಕೇಂದ್ರದ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಕೇಂದ್ರದ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆಯುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯ" ಎಂದು ಹೇಳಿದರು.
"ಇತ್ತೀಚೆಗೆ ಅಳ್ನಾವರದಲ್ಲಿ ಅಮೃತ ರೈಲ್ವೆ ನಿಲ್ದಾಣ ಶಂಕುಸ್ಥಾಪನೆ ನಡೆದಿದೆ. ಅದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಆ ಕಾರ್ಯಕ್ರಮ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು. ಆದರೆ ರಾಜ್ಯದ ಸಚಿವರು, ಶಾಸಕರನ್ನು ಸರಿಯಾಗಿ ಕರೆಯಲಿಲ್ಲ. ಈ ಬಗ್ಗೆ ಪರಿಶೀಲನೆ ಆಗಬೇಕು. ಕೇಂದ್ರದ ಕಾರ್ಯಕ್ರಮಗಳಲ್ಲಿ ಸರಿಯಾದ ಶಿಷ್ಟಾಚಾರ ಪಾಲನೆಯಾಗಬೇಕು. ಈ ಸಂಬಂಧ ಕಟ್ಟುನಿಟ್ಟಿನ ಕಾನೂನು ಮಾಡಬೇಕು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಎರಡೂವರೆ ವರ್ಷದ ಬಳಿಕ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಡ್, "ಮುನಿಯಪ್ಪ ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ಅವರನ್ನೇ ಆ ಬಗ್ಗೆ ಕೇಳಬೇಕು ಎಂದರು. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಬಂದಿಲ್ಲ" ಎಂದು ಹೇಳಿದರು.
ಇದನ್ನೂ ಓದಿ : D.K.Shivakumar: ಎಲ್ಲರ ಮಾತು ಮುಗಿಯಲಿ, ನಂತರ ನಮ್ಮ ಬಳಿ ಇರುವುದನ್ನು ಬಯಲು ಮಾಡುತ್ತೇವೆ- ಡಿ.ಕೆ.ಶಿವಕುಮಾರ್