ಧಾರವಾಡ: ಹೆತ್ತ ತಾಯಿ ತಂದೆಯನ್ನ ಮರೀಬ್ಯಾಡ ನೀನು.. ಎಂಬ ಕರುಣಾಜನಕವಾದ ಈ ಜಾನಪದ ಹಾಡಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಾವುಕರಾದ ಪ್ರಸಂಗ ಬುಧವಾರ ನಡೆಯಿತು. ರಾಜ್ಯೋತ್ಸವದ ನಿಮಿತ್ತ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಹಿರಿಯ ಮುಖಂಡರಾದ ಚಂದ್ರಕಾಂತ ಬೆಲ್ಲದ್, ಹಿರಿಯ ಸಾಹಿತಿ ಡಾ.ಮಲ್ಲಿಕಾ ಘಂಟಿ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಂಭಯ್ಯ ಬಳಗ, ಜಾಗೃತ ಗೀತೆಗಳನ್ನು ಹಾಡಿತು. ಈ ವೇಳೆ ಸಚಿವರು ಬಾವುಕರಾದರು. ಸಚಿವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದ ಹಿರಿಯ ಸಾಹಿತಿ ಡಾ.ಮಲ್ಲಿಕಾ ಘಂಟಿ, ಹಿರಿಯರಾದ ಚಂದ್ರಕಾಂತ ಬೆಲ್ಲದ್ ಮತ್ತಿತರರು ಏಕಚಿತ್ತದಿಂದ ಹಾಡು ಆಲಿಸಿದರು. ಅವರೂ ಸಹ ಕಣ್ಣೀರು ಒರೆಸಿಕೊಳ್ಳುತ್ತ ಈ ಜನಪದ ಹಾಡಿಗೆ ತಲೆದೂಗಿದರು. ಕೊನೆಗೆ ಬಾವುಕತೆಯಿಂದಲೇ ಚಪ್ಪಾಳೆ ತಟ್ಟಿ ಕಲಾವಿದರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಗೆ ಸಚಿವ ಸಂತೋಷ್ ಲಾಡ್ ಅವರು, ಇಂಪಾಗಿ, ಮನಮುಟ್ಟುವಂತೆ ಹಾಡು ಹಾಡಿದ ಕಲಾವಿದ ಶಂಭಯ್ಯ ನನ್ನು ವೇದಿಕೆಯಲ್ಲೇ ಕರೆದು ಅಲಂಗಿಸಿಕೊಂಡ ಮೆಚ್ಚುಗೆ ವ್ಯಕ್ತಪಡಿಸಿದರು. ವೈಯಕ್ತಿಕವಾಗಿ ಧನ ಸಹಾಯದ ಮೊತ್ತದ ಚೆಕ್ನ್ನು ಕೂಡ ನೀಡಿದರು. ಸಚಿವರ ಈ ನಡೆ ಇಡೀ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಕಾರಣವಾಯಿತು. ಹಿರಿಯರಾದ ಚಂದ್ರಕಾಂತ್ ಬೆಲ್ಲದ್ ಮತ್ತಿತರರು ಕೂಡ ಹರ್ಷ ವ್ಯಕ್ತಪಡಿಸಿದರು.
ವಾಣಿಜ್ಯ ನಗರಿಯಲ್ಲಿ ರಾಜ್ಯೋತ್ಸವ ಆಚರಣೆ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ವಾಣಿಜ್ಯನಗರಿಯಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ನಗರದ ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಪ್ರಸಾದ್ ಅಬ್ಬಯ್ಯ ಅವರು, ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು.
ಸಖತ್ ಸ್ಟೆಪ್ಸ್ ಹಾಕಿದ ವಿಪಕ್ಷ ನಾಯಕಿ: ಕನ್ನಡ ನಾಡಿನ ಕುರಿತು ಮಹತ್ವ ಸಾರಿದ ಶಾಸಕರು, ಗಣ್ಯರು, ಕನ್ನಡ ನಾಡು, ಭಾಷೆ ಜಲ ಏಕೀಕರಣದ ಮಹತ್ವ ಸಾರುವ ಸ್ಥಬ್ದ ಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಿವಿಧ ಕಲಾತಂಡಗಳ ಮೆರವಣಿಗೆಗೆ ಮೆರಗು ನೀಡಿದವು. ಇನ್ನು ಶ್ರೀ ಸಿದ್ಧಾರೂಢ ಮಠದಿಂದ ನೆಹರು ಮೈದಾನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಮೆರವಣಿಗೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ವೀಣಾ ಬಾರದ್ವಾಡ್, ಆಯುಕ್ತ ಈಶ್ವರ ಉಳ್ಳಾಗಡ್ಡಿ ಮುಂತಾದವರು ಭಾಗಿಯಾಗಿದ್ದರು. ಮೆರವಣಿಗೆ ವೇಳೆಯಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಸಖತ್ ಸ್ಟೇಪ್ ಹಾಕುವ ಮೂಲಕ ಗಮನ ಸೆಳೆದರು.
ಇದನ್ನೂ ಓದಿ: ಕರ್ನಾಟಕ 50; ಕನ್ನಡ ಧ್ವಜದ ರಚನೆ ಹೇಗಾಯ್ತು, ಸಾಂವಿಧಾನಿಕ ಮಾನ್ಯತೆಗಾಗಿ ಏನೆಲ್ಲಾ ನಡೆದಿದೆ ಗೊತ್ತಾ?