ಹುಬ್ಬಳ್ಳಿ(ಧಾರವಾಡ) : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಂಜಿ ಕೇಂದ್ರದ ಆಸೆಗಾಗಿ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿದ್ದರಾಮಯ್ಯ ಟ್ವೀಟ್ಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆರ್ಎಸ್ಎಸ್ನಿಂದಲೇ ಬಂದವರು. ಅದಕ್ಕೆ ನಾವು ಮಾತನಾಡುತ್ತೇವೆ. ಧರ್ಮವೊಂದರ ತುಷ್ಟೀಕರಣಕ್ಕೋಸ್ಕರ ಸಿದ್ದರಾಮಯ್ಯ ಹಾಗೇ ಮಾತನಾಡುತ್ತಿದ್ದಾರೆ.
ಇಟಲಿ ಮೂಲದ ನಾಯಕರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಆ ರೀತಿಯ ಹೇಳಿಕೆ ನೀಡ್ತಿದ್ದಾರೆ. ಇನ್ಮೇಲೆ ನಾನು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇನೆ ಎಂದು ಜೋಶಿ ಹೇಳಿದರು.
ಸಿದ್ದರಾಮಯ್ಯ ಓರ್ವ ಡ್ಯುಪ್ಲಿಕೇಟ್ ಕಾಂಗ್ರೆಸ್ನ ಡ್ಯುಪ್ಲಿಕೇಟ್ ಲೀಡರ್. ನಾವ್ಯಾರೂ ಕೇವಲ ಬಿಜೆಪಿಯವರೇ ಹಿಂದೂಗಳೆಂದು ಹೇಳಿಲ್ಲ. ಸದ್ಯ ಇವರು ನಾವು ಹಿಂದೂಗಳೆಂದು ಹೇಳುತ್ತಿದ್ದಾರೆ ಅನ್ನೋದೇ ಸಂತೋಷ. ಈ ಹಿಂದೆ ಇವರು ನಾವು ಹಿಂದೂಗಳೇ ಅಲ್ಲ ಎನ್ನುತ್ತಿದ್ದರು. ಇವಾಗ ಹಿಂದೂ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಿಜೆಪಿಯಲ್ಲಿದ್ದವರು ಮಾತ್ರ ಹಿಂದೂಗಳೇ?: ಆರ್ಎಸ್ಎಸ್ ನಾಯಕರಿಗೆ ಸಿದ್ದರಾಮಯ್ಯ ಪ್ರಶ್ನೆ
ಆರ್ಎಸ್ಎಸ್ ಬಗ್ಗೆ ಸಿದ್ದರಾಮಯ್ಯನವರಿಗೆ ಎಲ್ಲಾ ಗೊತ್ತಿದೆ. ಸುಮ್ಮನೇ ಗಂಜಿ ಕೇಂದ್ರದ ಆಸೆಗಾಗಿ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮೊದಲು ಅವರ ನಾಯಕರ ಮೂಲ ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.