ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ಕಿಮ್ಸ್‌ನ ಎಲ್ಲಾ ವೈದ್ಯರು ರೋಗಿಗಳ ಬಗೆಗೆ ಬಹಳ ಮುತುವರ್ಜಿ ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಗಂಭೀರ ಪ್ರಕರಣಗಳನ್ನು ಸಹ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವೈದ್ಯಕೀಯ ವೃತ್ತಿ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ವೈದ್ಯರನ್ನು ಶ್ಲಾಘಿಸಿದ್ದಾರೆ.
ಕಿಮ್ಸ್ ಸಂಸ್ಥೆಯನ್ನು ನಾಡಿಗೆ ಸಂಜೀವಿನಿಯಾಗುವಂತೆ ಮಾದರಿಯಾಗಿ ರೂಪಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಹೇಳಿದರು. ಇಂದು ಬೆಳಗಾವಿಯ ಏಕಸ್ ಇನ್ಫ್ರಾ ಮತ್ತು ಏಕಸ್ ಫೌಂಡೇಶನ್ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ನೀಡಿದ ಹೈ ಫ್ಲೋ ನಾಸಲ್ ಆಕ್ಸಿಜನ್ ಉಪಕರಣಗಳನ್ನು ಕಿಮ್ಸ್ ಸಂಸ್ಥೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕೋವಿಡ್‌ನಿಂದ ಗಂಭೀರವಾಗಿ ಬಳಲುತ್ತಿದ್ದ ರಾಜಕೀಯ ಪಕ್ಷದ ಜನಪ್ರತಿನಿಧಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿರಲಿಲ್ಲ. ಕೊನೆಗೆ ಕಿಮ್ಸ್ ನಲ್ಲಿ ಅವರು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.ಇಂತಹ ಸಹಸ್ರಾರು ಪ್ರಕರಣಗಳಲ್ಲಿ ಕಿಮ್ಸ್ ವೈದ್ಯರು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ ಎಂದರು. ಕೋವಿಡ್ ರೋಗಿಗಳ ಹೆಚ್ಚಳ ಹಿನ್ನೆಲೆ ಆಸ್ಪತ್ರೆಗೆ ಇನ್ನಷ್ಟು ಸೌಲಭ್ಯಗಳ ಅವಶ್ಯಕತೆ ಮತ್ತು ಗಂಭೀರತೆ ಬಗ್ಗೆ ಜಿಲ್ಲಾಡಳಿತ ಗಮನ ಸೆಳೆದಿತ್ತು. ಈ ಹಿನ್ನೆಲೆ ಏಕಸ್ ಸೇರಿದಂತೆ ನಾನಾ ಕಂಪನಿಗಳನ್ನು ಸಂಪರ್ಕಿಸಿ ಸಿಎಸ್‌ಆರ್ ಅಡಿ ಅನುದಾನ ಒದಗಿಸಲಾಗಿದೆ ಎಂದರು.
ಏಕಸ್ ಫೌಂಡೇಶನ್ ನಿರ್ದೇಶಕ ಪ್ರವೀಣಕುಮಾರ್ ನಾಯಕ ಮಾತನಾಡಿ, ಏಕಸ್ ಕಂಪನಿಯು ಸಿಎಸ್‌ಆರ್ ಚಟುವಟಿಕೆಗಳ ಅಡಿಯಲ್ಲಿ ಹುಬ್ಬಳ್ಳಿ, ಬೆಳಗಾವಿ ಹಾಗೂ ಕೊಪ್ಪಳ ಆಸ್ಪತ್ರೆಗಳಿಗೆ ಒಟ್ಟು 15 ವೆಂಟಿಲೇಟರ್‌ಗಳನ್ನು ಒದಗಿಸಿದೆ. ಪಂಜಾಬ್‌ನಲ್ಲಿ ತಯಾರಾಗುವ ಕಂಪನಿಂಯಿಂದಲೇ ನೇರವಾಗಿ ಖರೀದಿಸಿ ಪೂರೈಸಿದ್ದೇವೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಏಕಸ್ ಕಂಪನಿ ಉಪಾಧ್ಯಕ್ಷ ಬಸವರಾಜ ಸುಗಂ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಮತ್ತಿತರರು ಹಾಜರಿದ್ದರು.