ಮೇ 11ರಿಂದ ಸೀಲ್‌ಡೌನ್ ಪ್ರದೇಶ ಬಿಟ್ಟು ಉಳಿದೆಡೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ.. ಸಚಿವ ಶೆಟ್ಟರ್ - jagadish shetter corona meeting
ದೇಶದಲ್ಲೆಡೆ ಇರುವಂತೆ ಇಲ್ಲಿಯೂ ಮಾಲ್, ಮಾರುಕಟ್ಟೆ ಸಂಕೀರ್ಣಗಳು, ಬಾರ್ & ರೆಸ್ಟೋರೆಂಟ್, ಜಿಮ್, ಧಾರ್ಮಿಕ ಚಟುವಟಿಕೆಗಳು, ಸಭೆ,ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನೂ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಶೇ.25ರಷ್ಟು ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿವೆ.
ಧಾರವಾಡ : ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಈಗಾಗಲೇ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಮೇ 11ರಿಂದ ಹುಬ್ಬಳ್ಳಿಯ ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ವಾಣಿಜ್ಯ, ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೊರೊನಾ ನಿಯಂತ್ರಣ ಮತ್ತು ಲಾಕ್‌ಡೌನ್ ಸಡಿಲಿಕೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ (Shops and Establishment Act) ಪ್ರಕಾರ ಸ್ಥಾಪನೆಯಾಗಿರುವ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ವಾಣಿಜ್ಯ,ವಹಿವಾಟುಗಳು ಈಗಾಗಲೇ ಜಿಲ್ಲೆಯಾದ್ಯಂತ ಪುನರಾರಂಭವಾಗಿವೆ. ಮೇ 11ರಿಂದ ಕಿರಾಣಿ ಅಂಗಡಿ, ಹೋಟೆಲ್ಗಳಲ್ಲಿ ಪಾರ್ಸಲ್ ಸೇರಿ ವಿವಿಧ ವ್ಯಾಪಾರ ಚಟುವಟಿಕೆಗಳ ಪ್ರಾರಂಭಕ್ಕೆ ವಾರದ ಎಲ್ಲಾ ದಿನಗಳಲ್ಲಿಯೂ ಅವಕಾಶ ಕಲ್ಪಿಸಿ ಸಮರ್ಪಕ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಲಾಕ್‌ಡೌನ್ ಸಡಿಲಿಕೆಯ ಈ ಅವಕಾಶವನ್ನು ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಕೊರೊನಾ ನಿಯಂತ್ರಣ ಜೊತೆಗೆ ದೇಶದ ಭವಿಷ್ಯ, ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಇರುವುದರಿಂದ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಲಾಕ್ಡೌನ್ನಿಂದ ಕೆಲವು ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಈ ವಿನಾಯಿತಿಯನ್ನು ಜನತೆ ಮನಬಂದಂತೆ ಬಳಸಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅನಗತ್ಯ ತಿರುಗಾಟಕ್ಕೆ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸದೇ ಇದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸುವ ಕಾರ್ಯ ಚುರುಕುಗೊಳಿಸಬೇಕು. ಜನತೆ ಸಹಕರಿಸಿದರೆ ಕೊರೊನಾ ನಿಯಂತ್ರಣ ಸುಲಭ ಸಾಧ್ಯವಾಗುತ್ತದೆ ಎಂದರು.
ದೇಶದಲ್ಲೆಡೆ ಇರುವಂತೆ ಇಲ್ಲಿಯೂ ಮಾಲ್, ಮಾರುಕಟ್ಟೆ ಸಂಕೀರ್ಣಗಳು, ಬಾರ್ & ರೆಸ್ಟೋರೆಂಟ್, ಜಿಮ್, ಧಾರ್ಮಿಕ ಚಟುವಟಿಕೆಗಳು, ಸಭೆ,ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನೂ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಶೇ.25ರಷ್ಟು ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿವೆ. ಸಂಜೆ 7 ರಿಂದ ಬೆಳಗಿನ 7 ಗಂಟೆಯವರೆಗೆ ಲಾಕ್‌ಡೌನ್ ನಿರ್ಬಂಧ ಜಾರಿಯಾಗುವುದರಿಂದ ಈ ಅವಧಿಯಲ್ಲಿ ಕೈಗಾರಿಕೆಗಳು ರಾತ್ರಿ ಪಾಳಿಯ ಕಾರ್ಮಿಕರ ವಿಶ್ರಾಂತಿಗೆ ತಮ್ಮ ಆವರಣದಲ್ಲಿಯೇ ಅವಕಾಶ ಕಲ್ಪಿಸಿ ಉತ್ಪಾದನೆ ಚಟುವಟಿಕೆಗಳನ್ನು ಮುಂದುವರೆಸಲು ಅವಕಾಶ ನೀಡಲಾಗುವುದು. ವಿವಿಧ ಬಡಾವಣೆಗಳಿಗೆ ತರಕಾರಿ ಪೂರೈಕೆ ಮುಂದುವರೆಯಲಿ, ಇದರಿಂದ ಜನಸಂದಣಿ ನಿಯಂತ್ರಣವಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ಸೇವೆ ನೀಡದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಎಸ್ಡಿಎಂ ಸೇವೆ ಪ್ರಾರಂಭಿಸಿದೆ. ಈ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರೊಂದಿಗೆ ಮಾತನಾಡಿದಾಗ, ಅವರು ಸರ್ಕಾರದೊಂದಿಗೆ ಎಲ್ಲಾ ಸಹಕಾರ ನೀಡಲು ಎಸ್ಡಿಎಂ ಆಸ್ಪತ್ರೆಗೆ ನಿರ್ದೇಶನ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರದಾಣಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.