ಧಾರವಾಡ: ಉಪ ಚುನಾವಣೆ ಫಲಿತಾಂಶ ಸಂಬಂಧ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ 9ರಿಂದ 12 ಸ್ಥಾನ ಬಿಜೆಪಿಗೆ ಬರುತ್ತೆ ಅಂತಿದೆ. ಆದರೆ ನಾವು 15ಕ್ಕೆ 15 ಸ್ಥಾನ ಗೆಲ್ಲುತ್ತೇವೆ ಎಂದು ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡದ ತಮ್ಮ ಜನಸಂಪರ್ಕ ಕಚೇರಿಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇ ಐದಾರು ಕ್ಷೇತ್ರಗಳಲ್ಲಿ ಓಡಾಡಿದ್ದೇನೆ. ಜನರ ಬೆಂಬಲ ಚೆನ್ನಾಗಿ ಬಂದಿದೆ. ಫಲಿತಾಂಶ ವಿಚಾರವಾಗಿ ಜೆಡಿಎಸ್, ಕಾಂಗ್ರೆಸ್ ಏನೇ ಹೇಳಿದರೂ ನಾವು ಗೆಲ್ಲುವುದು ಖಚಿತ. ಎಕ್ಸಿಟ್ ಪೋಲ್ ಸಮೀಕ್ಷೆಯಂತೆ 9ರಿಂದ 12 ಸ್ಥಾನ ಬಂದರೆ ಬೇರೆಯವರ ಬೆಂಬಲ ಅಗತ್ಯವಿಲ್ಲ. ಒಂದು ವೇಳೆ ಕಡಿಮೆ ಸ್ಥಾನ ಬಂದರೆ ಆ ಮೇಲೆ ವಿಚಾರ ಮಾಡುತ್ತೇವೆ ಎಂದರು.
ಸಮೀಕ್ಷೆ ನಂಬುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಗೆ ಸೀಟ್ ಜಾಸ್ತಿ ಬಂದ್ರೆ ಮಾತ್ರ ಅವರು ಸಮೀಕ್ಷೆ ನಂಬುತ್ತಾರೆ. ದೇವೇಗೌಡರು ಸರ್ಕಾರ ಬೀಳಿಸಲು ಮನಸ್ಸಿಲ್ಲ ಎಂದು ಹೇಳಿದ್ರೆ ಅದು ಖುಷಿಯ ವಿಚಾರ. ಇನ್ನು ಸಮ್ಮಿಶ್ರ ಸರ್ಕಾರ ರಚಿಸಲು ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಪಲಿತಾಂಶದ ನಂತರ ನೋಡಿದರಾಯಿತು ಎಂದು ಶೆಟ್ಟರ್ ಹೇಳಿದರು.