ಧಾರವಾಡ: ರಾಜ್ಯದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ, ಈ ಬಾರಿ ಸಚಿವ ಸಂಪುಟ ವಿಸ್ತರಣೆ ಆಗಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ರಾತ್ರಿ ಅಮಿತ್ ಶಾ ಹುಬ್ಬಳ್ಳಿಗೆ ಬರಲಿದ್ದು, ಅವರನ್ನು ಸಿಎಂ ಹಾಗೂ ಯಡಿಯೂರಪ್ಪ ಬರಮಾಡಿಕೊಳ್ಳಲಿದ್ದಾರೆ. 28ರಂದು ಕೆಎಲ್ಇ ಕಾಲೇಜ್ನ 75 ವರ್ಷದ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವರು ಭಾಗಿಯಾಗಲಿದ್ದಾರೆ ಎಂದರು.
ಕೋರೆ ಅವರ ಕ್ರೀಡಾಂಗಣ ಉದ್ಘಾಟನೆಯನ್ನು ಅಮಿತ್ ಶಾ ಮಾಡಲಿದ್ದಾರೆ. ಅಲ್ಲಿಂದ ಧಾರವಾಡಕ್ಕೆ ಬಂದು ವಿಧಿ ವಿಜ್ಞಾನ ಕ್ಯಾಂಪಸ್ ಭೂಮಿ ಪೂಜೆ ನೆರವೇರಿಸುವರು. ಬಳಿಕ ಕುಂದಗೋಳಕ್ಕೆ ತೆರಳಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ವಿಧಿ ವಿಜ್ಞಾನ ಕ್ಯಾಂಪಸ್ಗೆ 48 ಎಕರೆ ಜಮೀನನ್ನು ಕೃಷಿ ವಿವಿ ಆವರಣದಲ್ಲಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಪ್ರಧಾನಿ ಮೋದಿ ಬಗ್ಗೆ ಕುಮಾರಸ್ವಾಮಿ ಚರಂಡಿ ಕ್ಲಿನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ವಿರೋಧ ಪಕ್ಷದಲ್ಲಿ ಕುಳಿತವರಿಗೆ ಮಾತನಾಡುವುದಕ್ಕೆ ಏನೂ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಲು ಅವರ ಬಳಿ ಏನಿಲ್ಲ. ಹೀಗಾಗಿ ಈ ರೀತಿ ಆಪಾದನೆ ಮಾಡಿ ತೃಪ್ತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದರು.
ಸೀಡಿ ಬಗ್ಗೆ ರಮೇಶ್ ಜಾರಕಿಹೋಳಿ ಹಾಗೂ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರು ತಮ್ಮ ಮಾಹಿತಿ ಮೇಲೆ ಮಾತಾಡಿರಬಹುದು. ಇವತ್ತಿನ ರಾಜಕಾರಣದ ವ್ಯವಸ್ಥೆ ವೈಯುಕ್ತಿಕ ನಿಂದನೆ ಮಾಡುವುದೇ ಆಗಿದೆ. ಅವರ ಸಾಧನೆ ಹೇಳಲು ಕಾಂಗ್ರೆಸ್ ಬಳಿ ಏನು ಇಲ್ಲ. ಜೆಡಿಎಸ್ನವರು ಈ ರೀತಿ ಆಪಾದನೆ ಮಾಡ್ತಾರೆ. ಪ್ರಧಾನಿ ಅವರು 2014ರ ನಂತರ ಏನೆಲ್ಲ ಮಾಡಿದ್ದಾರೆ ಎನ್ನುವುದಕ್ಕೆ ನಾವು ಪಟ್ಟಿ ಕೊಡ್ತೇವೆ. ಜನರ ಮುಂದೆ ನಾವು ಹೋಗಿ ಮತ ಕೇಳುತ್ತೇವೆ ಎಂದರು.
ರಮೇಶ ಜಾರಕಿಹೊಳಿ ಚುನಾವಣೆಗೆ ಪ್ರತಿ ಮನೆಗೆ 6 ಸಾವಿರ ಹಣ ಕೊಡುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಾದ್ರೂ ಬರೆದು ಕೊಟ್ಟಿದ್ದಾರಾ ಕೊಡ್ತೇವೆ ಅಂತಾ. ಇವೆಲ್ಲ ಬರಿ ಹಿಟ್ & ರನ್. ಸುಮ್ನೆ ಮೈಕಿನ ಮುಂದೆ ಏನಾದ್ರೂ ಮಾತಾಡಬೇಕು ಅಂತಾ ಮಾತನಾಡಿರಬಹುದು. ಅರ್ಥ ಇಲ್ಲದ್ದನ್ನು ಮಾತಾಡಿರುವುದನ್ನು ನೀವೂ ತೆಗೆದುಕೊಳ್ಳಬೇಡಿ, ಜನಾನೂ ತಗೆದುಕೊಳ್ಳುವುದಿಲ್ಲ. ನಾನು ಹಣ ಕೊಡುವ ಬಗ್ಗೆ ಆ ಅರ್ಥದಲ್ಲಿ ಹೇಳಿಲ್ಲ ಅಂತಾ ರಮೇಶ ಹೇಳಿದ್ದಾರೆ. ಅದಕ್ಕೆ ಏನ್ ಹೇಳ್ತೀರಿ. ಯಾರ ಹತ್ತಿರ ಕೂಡಾ ಪುರಾವೆ ಇಲ್ಲ ಎಂದು ಹೇಳಿದರು.
ನಮ್ಮ ಜಿಲ್ಲೆಗಳಲ್ಲಿ ನಾವು ಭೂಮಿ ಪೂಜೆ ಮಾಡಿ ಚುನಾವಣೆಗೆ ಹೋಗೋಕೆ ಸಮಯ ಇಲ್ಲ. ಮಾಡಿದ ಕೆಲಸ ಉದ್ಘಾಟನೆ ಮಾಡಲೂ ಸಹ ನಮ್ಮ ಬಳಿ ಸಮಯ ಇಲ್ಲ. ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ನಾನು ಕೇಳಿಲ್ಲ. ಚುನಾವಣೆ ಬರುತ್ತಿದೆ, ಸಚಿವ ಸಂಪುಟ ವಿಸ್ತರಣೆ ಆಗಲ್ಲ ಎಂದು ಸಚಿವ ಆಚಾರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಕನ್ನಡ ಶಾಲೆ ಉಳಿಸಬೇಕಿದೆ: ಹೊರಟ್ಟಿ