ಧಾರವಾಡ: ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವವರೆಗೂ ಹುಚ್ಚು ಬಿಡಲ್ಲ, ಹುಚ್ಚು ಬಿಡೋವರೆಗೂ ಸಿಎಂ ಆಗಲ್ಲ ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನುದಾನದ ಹಂಚಿಕೆ ಅಸಮಾಧಾನ ವಿಚಾರವಾಗಿ ಮಾತನಾಡಿದರು. ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಎಲ್ಲವೂ ಸರಿಯಾಗುತ್ತೆ. ಆ ವಿಷಯ ಮುಗಿದು ಹೋಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎರಡು ದಿನದಲ್ಲಿ ಉಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಬಿಜೆಪಿ ನಾಯಕರ ಮನೆಯಲ್ಲಿ ನೋಟು ಕೌಂಟಿಂಗ್ ಮಷಿನ್ ಇದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮೈಮೇಲೆ ಜ್ಞಾನವಿಲ್ಲದೇ ಹುಚ್ಚರ ಹಾಗೆ ಮಾತನಾಡುತ್ತಿದ್ದಾರೆ. ನೋಟು ಕೌಂಟಿಂಗ್ ಮಷಿನ್ ಇರುವುದು ತಪ್ಪಲ್ಲ. ವ್ಯಾಪಾರಸ್ಥರು ಎಲ್ಲರ ಮನೆಯಲ್ಲೂ ನೋಟು ಕೌಂಟಿಂಗ್ ಮಷಿನ್ ಇಟ್ಟುಕೊಂಡಿರುತ್ತಾರೆ. ಇವರಿಗೆ ವ್ಯಾಪಾರ ಮಾಡಿ ಗೊತ್ತಿಲ್ಲ. ಬರೀ ಭ್ರಷ್ಟಾಚಾರದ ದಂಧೆ ಮಾಡಿ ಗೊತ್ತು. ಮೈಸೂರಿನಲ್ಲಿ ಅವರು, ಅವರ ಮಕ್ಕಳು, ಸ್ನೇಹಿತರು ಎಷ್ಟರ ಮಟ್ಟಿಗೆ ಮರಳು ದಂಧೆ ಮಾಡಿದ್ದಾರೆ ಎಂಬುದನ್ನು ನಾನು ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದೆ. ಭ್ರಷ್ಟಾಚಾರ ಬಿಟ್ಟು ಬೇರೆ ಗೊತ್ತಿಲ್ಲ. ಹಾಗಾಗಿ ಸುಮ್ಮನೆ ಏನೋ ಒಂದು ಆಪಾದನೆ ಮಾಡಬೇಕು ಅಂತ ಮಾಡುತ್ತಾರೆ. ನೋಟು ಕೌಂಟಿಂಗ್ ಮಷಿನ್ ಇದೆ ಎಂಬುದರ ಅರ್ಥ ಭ್ರಷ್ಟಾಚಾರ ಮಾಡುತ್ತೇವೆ ಅಂತಾನಾ? ನೋಟು ಪ್ರಿಂಟ್ ಮಷಿನ್ ಇಲ್ಲವಲ್ಲಾ ಎಂದು ತಿರುಗೇಟು ನೋಡಿದರು.
ಇದನ್ನೂ ಓದಿ: ಮೈಸೂರಲ್ಲಿ ಹೆಲಿಟೂರಿಸಂಗೆ ಸಿದ್ದರಾಮಯ್ಯರಿಂದಲೂ ವಿರೋಧ
ಪ್ರತಿಯೊಬ್ಬರ ಮನೆಯಲ್ಲೂ ಇವರು ನೋಡಿಕೊಂಡು ಬಂದಿದ್ದಾರೆ. ಯಾರ ಮನೆಯಲ್ಲಿ ನೋಟು ಕೌಂಟಿಂಗ್ ಮಷಿನ್ ಇದೆ ಅಂತಾ ಪ್ರತಿಯೊಬ್ಬರ ಮನೆ ಮನೆಗೂ ಹೋಗಿ ನೋಡಿಕೊಂಡು ಬಂದಿದ್ದಾರೆ. ಅಭಿವೃದ್ಧಿ ಕೆಲಸ ಬಿಟ್ಟು ನೋಟು ಕೌಂಟಿಂಗ್ ಮಷಿನ್ ಹುಡುಕುತ್ತಾ ಹೋಗಿದ್ದಕ್ಕೆ ಚಾಮುಂಡೇಶ್ವರಿಯಲ್ಲಿ ಜನ ಅವರನ್ನು ಸೋಲಿಸಿದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉಪ ಚುನಾವಣೆಯಲ್ಲಿ ಶಿಕ್ಷಣ ಸಚಿವರು ಬ್ಯುಸಿ.. ಯುಗಾದಿ ಬಳಿಕ ವಾರ್ಷಿಕ ಪರೀಕ್ಷೆ ನಿರ್ಧಾರ
ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಸಿಡಿ ವಿಷಯದ ಬಗ್ಗೆ ಕೇಳಬೇಡಿ. ಸಿಡಿ ವಿಷಯ ಅಸಹ್ಯ ಹುಟ್ಟಿಸುತ್ತದೆ. ಅದರ ಬಗ್ಗೆ ನಾನು ಎಲ್ಲಿಯೂ ಪ್ರತಿಕ್ರಿಯಿಸಿಲ್ಲ ಎಂದರು.