ಧಾರವಾಡ: ಕಾಗವಾಡ ಉಪ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದೇನೆ. ನೂರಕ್ಕೆ ನೂರು ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಪಕ್ಷದ ಮುಖಂಡರ ಜೊತೆ ಸೇರಿ ಪ್ರಚಾರ ನಡೆಸಿದ್ದೇನೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ 15 ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ, ಎಲ್ಲವನ್ನೂ ಡಿ. 9ರ ನಂತರ ನೋಡಿ ಎಂದು ಹೇಳಿದ್ರು. ಫಲಿತಾಂಶದ ನಂತರ ಸರ್ಕಾರ ಪತನವಾಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಇನ್ನು ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರುತ್ತೆ. ಸಿದ್ದರಾಮಯ್ಯ ಏನ್ ಜೋತಿಷ್ಯ ಹೇಳ್ತಾರಾ, ಮತದಾರರು ಓಟು ಹಾಕುವುದು ಇವರಿಗೇನು ಗೊತ್ತು ಎಂದು ಸಿದ್ದರಾಮಯ್ಯ ಅವರಿಗೆ ತಿವಿದರು.
ಹಿಂದಿನ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಇದು ಎಲ್ಲರಿಗೂ ಗೊತ್ತಿದೆ. ಯಾವುದೇ ಅಧಿಕಾರಿಗಳು ಏಜೆಂಟರಂತೆ ವರ್ತಿಸುತ್ತಿಲ್ಲ, ಹಿಂದೆ ಅವರ ಸರ್ಕಾರ ಇದ್ದಾಗ ಅವರೇನು ಇವರ ಏಜೆಂಟರಾಗಿದ್ದರಾ? ಸರ್ಕಾರಿ ಅಧಿಕಾರಿಗಳ ಬಗ್ಗೆ ಹಾಗೆಲ್ಲ ಮಾತನಾಡುವದು ತಪ್ಪು ಎಂದ್ರು.
ಸವದಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದಾರೆಂವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲಕ್ಷಣ ಸವದಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ರಾಷ್ಟ್ರಮಟ್ಟದ ಯಾವುದೇ ನಾಯಕರು ಬಂದ್ರು ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುತ್ತೆ. ಅಸಮಾಧಾನದ ಮಾತೇ ಇಲ್ಲ ಎಂದರು.
ಬಿಜೆಪಿ ನಾಯಕರ ಹನಿಟ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಕಾನೂನು ನೋಡಿಕೊಳ್ಳುತ್ತೆ, ಅದರ ಬಗ್ಗೆ ನಾ ಏನೂ ಮಾತನಾಡುವುದಿಲ್ಲ, ಎಲ್ಲ ಪಕ್ಷದವರಿಗೂ ಕಾನೂನುಗಳು ಒಂದೇ ಎಂದು ಪ್ರತಿಕ್ರಿಯಿಸಿದ್ರು.