ಹುಬ್ಬಳ್ಳಿ: ನಗರ ಪ್ರದೇಶಗಳಲ್ಲಿ ಶುದ್ಧ ಹಾಗೂ ಪ್ಯಾಕೇಜ್ಡ್ ಕುಡಿಯುವ ನೀರು ಸರಬರಾಜು ಒಂದು ದಂಧೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಕಳಪೆ ಹಾಗೂ ಅಶುದ್ಧ ನೀರು ಪೂರೈಕೆ ಮಾಡಲು ಮುಂದಾಗುತ್ತಾರೆ. ಆದ್ರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂತಹ ಅನಧಿಕೃತ ಹಾಗೂ ಅಶುದ್ಧ ನೀರಿನ ಘಟಕಗಳಿಗೆ ಕಡಿವಾಣ ಹಾಕಲು ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಬೇಸಿಗೆಯನ್ನು ಬಂಡವಾಳ ಮಾಡಿಕೊಂಡು ನೀರು ದಂಧೆಯಲ್ಲಿ ತೊಡಗುವ ಅನಧಿಕೃತ ನೀರಿನ ಘಟಕಗಳ ಮೇಲೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 19 ಶುದ್ಧ ನೀರಿನ ಘಟಕಗಳಿವೆ. ಈ 19 ಶುದ್ಧ ನೀರಿನ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜತೆಗೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕಿದೆ.
ನಗರದಲ್ಲಿನ ಖನಿಜಯುಕ್ತ ನೀರು ಮತ್ತು ಶುದ್ಧೀಕರಿಸಿದ ನೀರಿನ ಸ್ಥಾವರಗಳು ನಿಗದಿತ ನಿಯಮಗಳು ಮತ್ತು ಸ್ಥಾಪನೆಗೆ ಸಂಬಂಧಿಸಿದ ಮಾನದಂಡಗಳಿಗೆ ಬದ್ಧವಾಗಿರಬೇಕು. ಕ್ಯಾಲ್ಸಿಯಂ, ಮೆಗ್ನೀಶಿಯಮ್, ಫ್ಲೋರೈಡ್ ಮುಂತಾದ ಖನಿಜಯುಕ್ತ ನೀರಿನ ಪದಾರ್ಥಗಳ ನಿಗದಿತ ಮಾನದಂಡಗಳನ್ನು ಪಾಲಿಸಬೇಕು. ಪ್ರತಿ ಖನಿಜಯುಕ್ತ ನೀರಿನ ಘಟಕವು ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಗಳಂತಹ ಸೌಲಭ್ಯಗಳನ್ನು ಹೊಂದಿರಬೇಕು. ನಗರದಲ್ಲಿನ ಖನಿಜಯುಕ್ತ ನೀರಿನ ಮಟ್ಟ ಮತ್ತು ಇತರೆ ಗುಣಗಳನ್ನು ಪರೀಕ್ಷಿಸಿ ನಮೂದಿಸಿಕೊಂಡಿರಬೇಕು. ಘಟಕಗಳು ಪ್ರತಿ ದಿನ ಶುದ್ಧೀಕರಿಸಿದ ಮತ್ತು ಖನಿಜಯುಕ್ತ ನೀರಿನ ನಡುವಿನ ವ್ಯತ್ಯಾಸವನ್ನು ನಮೂದಿಸಿಕೊಂಡಿರಬೇಕು ಎಂಬುದನ್ನು ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರತಿ ಘಟಕಗಳು ಕಾನೂನು ಬಾಹಿರವಾಗಿ ನೀರು ಸರಬರಾಜು ಮಾಡುವಂತಿಲ್ಲ. ಪ್ರತಿ ಕ್ಯಾನ್ಗಳು ಹಾಗೂ ವಾಟರ್ ಬಾಟಲ್ಗಳ ಮೇಲೆ FSSI ಹಾಗೂ ISI ಗುರುತು ಇರಬೇಕು. ಸಾರ್ವಜನಿಕರು ಹಾಗೂ ಗ್ರಾಹಕರು ಕೂಡ ಇವೆಲ್ಲ ಮಾನದಂಡಗಳನ್ನು ಪಾಲಿಸುವ ನೀರನ್ನೇ ಬಳಕೆ ಮಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.
ಅನಧಿಕೃತ ಘಟಕಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೂ ದೂರು ಇಲಾಖೆಗೆ ಬಂದಿಲ್ಲ. ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳ ಮಾಲೀಕರು ಸಂಘ ಕಟ್ಟಿಕೊಂಡು ಅನಧಿಕೃತ ಘಟಕಗಳು ತಲೆ ಎತ್ತದಂತೆ ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಅನಧಿಕೃತ ಘಟಕಗಳಿಗೆ ಕಡಿವಾಣ ಬಿದ್ದಂತಾಗಿದ್ದು, ಉತ್ತಮ ಬೆಳವಣಿಗೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.